ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ವಿಚಾರ ಸಂಬಂಧ ತನಿಖೆಗೆ ಕೇಂದ್ರ ವಿಭಾಗ ಡಿಸಿಪಿ ಶೇಖರ್ 3 ತಂಡ ರಚನೆ ಮಾಡಿದ್ದಾರೆ. ಈ ತನಿಖಾ ತಂಡ ಟೆಕ್ನಿಕಲ್ ಅನಾಲಿಸಿಸ್ ಮಾಡಲಿದೆ, ಹಾಗೆಯೇ ವಿಧಾನಸೌಧಕ್ಕೆ ನಾಸೀರ್ ಹುಸೇನ್ ಜೊತೆ ಬಂದಿದ್ದವರಿಂದ ಮಾಹಿತಿ ಸಂಗ್ರಹಿಸಲಿದೆ.
ಅಷ್ಟೆ ಅಲ್ಲದೆ ವಿಡಿಯೋಗಳನ್ನ ಪರಿಶೀಲನೆ ಮಾಡಿ ಪೊಲೀಸರು ಗುರುತಿಸಲಿದ್ದಾರೆ. ಘೋಷಣೆ ಕೂಗಿದವರನ್ನ ವಶಕ್ಕೆ ಪಡೆಯಲು ಹುಡುಕಾಟ ನಡೆಸುತ್ತಿದ್ದು, ಈಗಾಗಲೇ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ FIR ದಾಖಲಾಗಿದೆ. ಕಮಿಷನರ್ ಬಿ.ದಯಾನಂದ್ ಘಟನೆ ಬಗ್ಗೆ ವಿವರ ಪಡೆದಿದ್ದಾರೆ. ಘೋಷಣೆ ಕೂಗಿದ ಸಂದರ್ಭದಲ್ಲಿ ನಾಸೀರ್ ಹುಸೇನ್ ಬಳಿ ಇದ್ದ ವ್ಯಕ್ತಿಗಳನ್ನು ಕರೆಸಿ ಇಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಈ ಮಧ್ಯೆ, ಡಾ.ಜಿ.ಪರಮೇಶ್ವರ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಗೃಹ ಸಚಿವರ ನಿವಾಸಕ್ಕೆ ಕಾನೂನು ಸುವ್ಯವಸ್ಥೆ ADGP ಹಿತೇಂದ್ರ, ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರು ಭೇಟಿ ನೀಡಿದ್ದಾರೆ. ಗೃಹ ಸಚಿವರಿಗೆ ಪೊಲೀಸ್ ಅಧಿಕಾರಿಗಳು ಎಲ್ಲಾ ಮಾಹಿತಿ ನೀಡಿದ್ದಾರೆ.
ಹಾಗೆಯೇ ಪಾಕ್ ಪರ ಘೋಷಣೆ ವಿರುದ್ಧ ಸದನದ ಒಳಗೂ, ಹೊರಗೂ ಬಿಜೆಪಿ ಪ್ರತಿಭಟನೆ ನಡೆಸಲಿದೆ. ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಶಾಸಕರ ಭವನದ ಗೇಟ್ನಿಂದ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆವರೆಗೆ ಮೆರವಣಿಗೆ ನಡೆಯಲಿದೆ. ಬಿ.ವೈ.ವಿಜಯೇಂದ್ರ ಸೇರಿದಂತೆ ಬಿಜೆಪಿ MLAಗಳು, MLCಗಳು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ : ‘ಹೈಡ್ ಅಂಡ್ ಸೀಕ್’ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ ಸಚಿವ ರಾಮಲಿಂಗಾರೆಡ್ಡಿ..!