ಚಿತ್ರದುರ್ಗ : ಜಿಲ್ಲೆಯ ಹಲವು ಕಡೆ ತಡರಾತ್ರಿ ವರುಣನ ಅಬ್ಬರದಿಂದ ಜನರು ತತ್ತರಿಸಿ ಹೋಗಿದ್ದಾರೆ. ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ, ಮಲ್ಲಸಮುದ್ರ, ತಳಕು, ಕೋಡಿಹಳ್ಳಿ ಹಳ್ಳ ಭರ್ತಿಯಾಗಿ ಉಕ್ಕಿ ಹರಿಯುತ್ತಿವೆ.
ಕೋಡಿಹಳ್ಳಿ ಬಳಿ ಭಾರೀ ಮಳೆಗೆ ಬೃಹತ್ ಗಾತ್ರದ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ. ಹೆದ್ದಾರಿ ಪಕ್ಕದಲ್ಲಿದ್ದ ಕಾಂಪೌಂಡ್ ಗೋಡೆ ಕುಸಿದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಹಳ್ಳ ತುಂಬಿ ಹರಿಯುತ್ತಿರೋದ್ರಿಂದ ಬೇಡರೆಡ್ಡಿಹಳ್ಳಿ-ದೇವರೆಡ್ಡಿಹಳ್ಳಿ, ಗೌರಸಮುದ್ರ ಸಂಚಾರ ಮಾರ್ಗ ಬಂದ್ ಆಗಿದೆ. ಹಳ್ಳ ದಾಟಲು ಆಗದೇ ವಾಹನ ಸವಾರರು ವಾಪಸ್ ಹೋಗುವಂತ ಪರಿಸ್ಥಿತಿ ಬಂದೊದಗಿದೆ.
ಭರ್ಜರಿ ಮಳೆಯಿಂದವ ಹತ್ತಾರು ಅವಾಂತರ ಸೃಷ್ಟಿಯಾಗಿದ್ದು, ಚಳ್ಳಕೆರೆ ನಗರದಲ್ಲಿ ರಹಿಂ ನಗರ ಜಲಾವೃತವಾಗಿ ಜನ ಜೀವನ ಅಸ್ತವ್ಯಸ್ಥವಾಗಿದೆ. ಬಾರಿ ಮಳೆಯಿಂದ ಮನೆಗಳಿಗೆ ನುಗ್ಗಿದ ನೀರು, ಮನೆಯಲ್ಲಿದ್ದ ವಸ್ತುಗಳು ನೀರು ಪಾಲಾಗಿದೆ. ಅಪಾರ ಮೌಲ್ಯದ ಬೆಳೆಗಳು ಕೂಡಾ ಹಾನಿಯಾಗಿದೆ. ಇನ್ನೊಂದೆಡೆ ಬರದ ನಾಡಲ್ಲಿ ವರುಣನ ಅಬ್ಬರ ರೈತರಿಗೆ ಹರ್ಷ ತಂದಿದೆ.
ಚಾರ್ಮಾಡಿ ಘಾಟ್ನಲ್ಲಿ ಮಳೆ, ವಾಹನ ಸಂಚಾರ ಅಸ್ತವ್ಯಸ್ತ : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನಲ್ಲಿ ಸುರಿದ ನಿರಂತರ ಮಳೆಗೆ ರಸ್ತೆ ಮೇಲೆ ಎರಡು ಅಡಿ ಎತ್ತರಕ್ಕೆ ಮಳೆ ನೀರು ಹರಿಯುತ್ತಿದೆ. ಮಳೆಗೆ ಗುಡ್ಡದಿಂದ ಕೆಸರು ಮಿಶ್ರಿತ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಚಾಲಕರಿಗೆ ರಸ್ತೆ ಕಾಣದಂತಾಗಿದೆ.
ರಾಜ್ಯದೆಲ್ಲೆಡೆ ಮಳೆ, 4 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ : ಇಂದು ರಾಜ್ಯದೆಲ್ಲೆಡೆ ಮತ್ತೆ ಮಳೆಯಾಗುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ. 4 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.
ಇನ್ನೂ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಗದಗ, ಹಾವೇರಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿಯೂ ಭಾರೀ ಮಳೆಯ ಮುನ್ಸೂಚನೆ ಇದೆ. ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಚಿಕ್ಕಮಗಳೂರಿನಲ್ಲಿಯೂ ಮಳೆಯಾಗುವ ನಿರೀಕ್ಷೆಯಿದೆ
ಇದನ್ನೂ ಓದಿ : ಮಂಡ್ಯ : ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ – ಗಂಡನೇ ಕೊಲೆ ಮಾಡಿರುವ ಶಂಕೆ!