Download Our App

Follow us

Home » ಸಿನಿಮಾ » ‘ಒಂದು ತಾತ್ಕಾಲಿಕ ಪಯಣ’ ಚಿತ್ರದ ಪ್ರಧಾನ ಪಾತ್ರದಲ್ಲಿ ಸೂಚನ್ ಶೆಟ್ಟಿ..!

‘ಒಂದು ತಾತ್ಕಾಲಿಕ ಪಯಣ’ ಚಿತ್ರದ ಪ್ರಧಾನ ಪಾತ್ರದಲ್ಲಿ ಸೂಚನ್ ಶೆಟ್ಟಿ..!

ಯುವ ನಟ ಸೂಚನ್ ಶೆಟ್ಟಿ ಅಭಿನಯದ `ಒಂದು ತಾತ್ಕಾಲಿಕ ಪಯಣ’ (ಒಟಿಪಿ) ಚಿತ್ರದ ಟ್ರೈಲರ್ ಈಗ ಒಂದಷ್ಟು ಚರ್ಚೆಗೆ ಗ್ರಾಸವಾಗಿದೆ. ಸಿನಿಮಾ ರಂಗದಲ್ಲಿ ಸಾಧಿಸಬೇಕೆಂಬ ಕನಸು ಹೊತ್ತ ಜೀವಗಳ ನೋವು, ನಿರಾಸೆಗಳ ಕಥನ ನೋಡುಗರಿಗೆಲ್ಲ ನಾಟಿಕೊಂಡಿದೆ. ಒಂದು ವಿಶಿಷ್ಟ ಕಥೆಯ ಸುಳಿವಿನೊಂದಿಗೆ ಗಮನ ಸೆಳೆದಿರುವ ಈ ಚಿತ್ರದ ಪ್ರಧಾನ ಪಾತ್ರದಲ್ಲಿ ಸೂಚನ್ ಶೆಟ್ಟಿ ನಟಿಸಿದ್ದಾರೆ. ಸ್ಕ್ರೀನ್ ಪ್ಲೇನಲ್ಲಿಯೇ ವೈಶಿಷ್ಟ್ಯ ಹೊಂದಿರೋ ಸದರಿ ಸಿನಿಮಾದ ಆತ್ಮದಂತಿರೋ ಪಾತ್ರಕ್ಕೆ ಸೂಚನ್ ಶೆಟ್ಟಿ ಜೀವ ತುಂಬಿದ್ದಾರೆ. ಅದರ ಒಂದಷ್ಟು ಚಹರೆಗಳು ಈ ಟ್ರೈಲರಿನಲ್ಲಿ ಕಾಣಿಸಿಕೊಂಡಿವೆ.

ಮೂಲತಃ ಕುಂದಾಪುರದವರಾದ ಸೂಚನ್ ಶೆಟ್ಟಿ ಸರಿಸುಮಾರು ಹನ್ನೆರಡು ವರ್ಷಗಳಿಂದ ಚಿತ್ರರಂಗದ ಭಾಗವಾಗಿದ್ದಾರೆ. ಕನಸಿನ ಹಾದಿಯಲ್ಲಿ ಅವುಡುಗಚ್ಚಿ ಮುಂದುವರೆದು ಬಂದಿದ್ದಾರೆ. ಇಂಥಾ ಸುದೀರ್ಘ ಯಾನವೊಂದು `ಒಂದು ತಾತ್ಕಾಲಿಕ ಪಯಣ’ದ ಮೂಲಕ ಸಾರ್ಥಕ್ಯ ಕಾಣುತ್ತದೆಂಬ ತುಂಬು ನಂಬಿಕೆ ಅವರಲ್ಲಿದೆ. ಇದೊಂದು ಆಂಥಾಲಜಿ ಬಗೆಯ ಸಿನಿಮಾ. ಸೂಚನ್ ಶೆಟ್ಟಿ ಅವರ ಸ್ನೇಹಿತರೂ ಆಗಿರುವ ಕಾರ್ತಿಕ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದರ ಲೀಡ್ ಪಾತ್ರಗಳಲ್ಲೊಂದನ್ನು ಆವಾಹಿಸಿಕೊಳ್ಳುವ ಅವಕಾಶವನ್ನು ಸೂಚನ್ ಸವಾಲಾಗಿ ಸ್ವೀಕರಿಸಿ ನಟಿಸಿದ್ದಾರಂತೆ. ಈ ಮೂಲಕ ಒಂದೊಳ್ಳೆ ಅನುಭವ ಪಡೆದುಕೊಂಡಿರುವ ಸೂಚನ್ ಪಾಲಿಗೆ ಒಟಿಪಿ ಮೂಲಕ ಓರ್ವ ನಟನಾಗಿ ಬ್ರೇಕ್ ಸಿಗುವ ನಿರೀಕ್ಷೆಗಳಿವೆ.

ಕುಂದಾಪುರವನ್ನೇ ಕರ್ಮಭೂಮಿಯಾಗಿಸಿಕೊಂಡಿರುವ ರವಿ ಬಸ್ರೂರು ನಿರ್ಮಾಣ ಮಾಡಿರುವ ಚೊಚ್ಚಲ ಚಿತ್ರವಿದು. ಆರು ವರ್ಷಗಳ ಕಾಲ ಸೂಚನ್ ಶೆಟ್ಟಿ ರವಿ ಬಸ್ರೂರು ಗರಡಿಯಲ್ಲಿ ನಿರ್ದೇಶನ ವಿಭಾಗದಲ್ಲಿ ಪಳಗಿಕೊಂಡಿದ್ದರು. ಅವರು ನಿರ್ದೇಶನ ಮಾಡಿದ್ದ `ಕಡಲ್’ ಎಂಬ ಚಿತ್ರದಲ್ಲಿ ಒಂದು ನೆಗೆಟಿವ್ ರೋಲ್ ಮಾಡಿದ್ದರು. ಅದು ಸೂಚನ್ ಪಾಲಿಗೆ ನಟನಾಗಿ ಮೊದಲ ಚಿತ್ರ. ಆ ಪಾತ್ರಕ್ಕೆ ಪ್ರೇಕ್ಷಕರ ಕಡೆಯಿಂದ ಮೆಚ್ಚುಗೆ ಮೂಡಿಕೊಂಡಿತ್ತು. ಅದಾದ ಬಳಿಕ ನಟನೆ ಮತ್ತು ನಿರ್ದೇಶನವನ್ನು ಸರಿದೂಗಿಸಿಕೊಂಡು ಹೋಗುವ ತೀರ್ಮಾನಕ್ಕೆ ಸೂಚನ್ ಬಂದಿದ್ದರು.

ಈ ನಡುವೆ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರಾ ಚಿತ್ರದಲ್ಲೊಂದು ಪಾತ್ರವೂ ಸೂಚನ್ ಪಾಲಿಗೆ ಒಲಿದು ಬಂದಿತ್ತು. ಫಾರೆಸ್ಟ್ ಗಾರ್ಡ್ ರವಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಬದುಕಿಗಾಗಿ ಬೇರೆ ಕೆಲಸ ನೋಡಿಕೊಳ್ಳುವ ಸಂದರ್ಭ ಬಂದಾಗಲೂ ಸಿನಿಮಾ ಸಂಬಂಧಿತ ರಹದಾರಿಗಳನ್ನು ಹುಡುಕಿಕೊಂಡಿದ್ದವರು ಸೂಚನ್. ಒಂದು ಸೀರಿಯಲ್ಲಿನಲ್ಲಿಯೂ ನಟಿಸಿದ್ದ ಅವರು, `ಒಂದು ತಾತ್ಕಾಲಿಕ ಪಯಣ’ದಲ್ಲಿ ಮಹತ್ವದ ಪಾತ್ರ ಸಿಕ್ಕ ಖುಷಿಯಲ್ಲಿದ್ದಾರೆ. ಎಲ್ಲರನ್ನೂ ಕಾಡಬಲ್ಲ ಆ ಪಾತ್ರಕ್ಕೆ ಒಂದಷ್ಟು ತಯಾರಿ ನಡೆಸಿಯೇ ಅವರು ಜೀವ ತುಂಬಿದ್ದಾರೆ. ತಮ್ಮ ಇಷ್ಟೂ ವರ್ಷಗಳ ಪಯಣ ಒಟಿಪಿ ಮೂಲಕ ಸಾರ್ಥಕ್ಯ ಕಾಣುತ್ತದೆಂಬ ನಂಬಿಕೆ ಸೂಚನ್ ಅವರಲ್ಲಿದೆ.

ಇದನ್ನೂ ಓದಿ : ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಹೃದಯಾಘಾತದಿಂದ ಸಾವು..!

Leave a Comment

DG Ad

RELATED LATEST NEWS

Top Headlines

ನಟ ದರ್ಶನ್​ಗೆ ನಾಳೆ ನಿರ್ಣಾಯಕ ದಿನ – ಏನಾಗಲಿದೆ ಬೇಲ್ ಭವಿಷ್ಯ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿರುವ ನಟ ದರ್ಶನ್​​ಗೆ ನಾಳೆ ನಿರ್ಣಾಯಕ ದಿನವಾಗಿದೆ. ಮಧ್ಯಂತರ ಜಾಮೀನು ಪಡೆದು ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ ಸದ್ಯ

Live Cricket

Add Your Heading Text Here