ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿಯ ಮಗಳು ಹಾಗೂ ಅಳಿಯನ ಸೋಗಿನಲ್ಲಿ ಜನರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ಓಡಿಶಾ ದಂಪತಿಯನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿಗಳನ್ನು ಕಂಧಮಾಲ್ ಜಿಲ್ಲೆಯ ನಿವಾಸಿ ಪತ್ನಿ ಹನ್ಸಿತಾ ಅಭಿಲಿಪ್ಸಾ ಹಾಗೂ ಪತಿ ಅನಿಲ್ ಕುಮಾರ್ ಮೊಹಂತಿ ಎಂದು ಗುರುತಿಸಲಾಗಿದೆ.
ಪಿಎಂ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ ಅವರ ಮಗಳು ಮತ್ತು ಅಳಿಯನ ಸೋಗಿನಲ್ಲಿ ಬಂದು ಜನರನ್ನು ವಂಚಿಸುತ್ತಿದ್ದರು ಹಾಗೂ ನಾವು ಪ್ರಭಾವಿಗಳ ಸಂಪರ್ಕವನ್ನು ಹೊಂದಿದ್ದೇವೆ ಎಂದು ಹೇಳಿಕೊಂಡು ವಂಚನೆ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಒಡಿಶಾ ಪೊಲೀಸರು ಬಂಧಿಸಿದ್ದಾರೆ.
ತನಿಖೆ ನಡೆಸಿದ ಪೊಲೀಸರು ದಂಪತಿಯ ನಿವಾಸದಿಂದ ಹಲವಾರು ಛಾಯಾಚಿತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಅವುಗಳಲ್ಲಿ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಉನ್ನತ ವ್ಯಕ್ತಿಗಳೊಂದಿಗೆ ತೆಗೆಸಿಕೊಂಡಿರುವ ಫೋಟೋಗಳನ್ನು ಇಟ್ಟುಕೊಂಡಿದ್ದಾರೆ. ತಂತ್ರಜ್ಞಾನದ ಮೂಲಕ ಉನ್ನತ ವ್ಯಕ್ತಿಗಳೊಂದಿಗೆ ಇರುವ ಫೋಟೋಗಳನ್ನು ರಚಿಸಿದ್ದಾರೆ. ವಂಚನೆ ಮಾಡಲು ಈ ಫೋಟೋಗಳನ್ನು ಬಳಸಿಕೊಂಡಿದ್ದಾರೆ. ಭುವನೇಶ್ವರದಲ್ಲಿ ಈಗಾಗಲೇ ಶ್ರೀಮಂತ ಉದ್ಯಮಿ, ಬಿಲ್ಡರ್‌ಗಳು, ಗಣಿಗಾರಿಕೆಯ ನಿರ್ವಾಹಕರು ಸೇರಿದಂತೆ ಇತರ ಪ್ರಭಾವಿ ವ್ಯಕ್ತಿಗಳನ್ನು ವಂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಗಣಿ ಮಾಲೀಕರ ದೂರಿನ ಮೇರೆಗೆ ಓಡಿಶಾ ದಂಪತಿಯನ್ನು ಭಾನುವಾರ ಬಂಧಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 329 (3), 319 (2), 318 (4), ಮತ್ತು 3 (5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ : ‘ಅಪ್ಪಂಗೆ ಹುಟ್ಟಿದ್ರೆ ತೊಡೆ ತಟ್ಟಿ ಬಾರೋ’ ಲೈನ್ಗೆ ಕ್ಲ್ಯಾರಿಟಿ ಕೊಟ್ಟ ಕಿಚ್ಚ ಸುದೀಪ್.. ಏನಂದ್ರು?