ಬೆಂಗಳೂರು : ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗುತ್ತಿರುವ ಬೆನ್ನಲ್ಲೇ ಅವರ ಪತ್ನಿ ಪಾರ್ವತಿ ಅವರು ಸೈಟ್ ಹಿಂದಿರುಗಿಸಲು ತೀರ್ಮಾನಿಸಿದ್ದಾರೆ. ಸೈಟ್ ವಾಪಸ್ ನೀಡುವ ಬಗ್ಗೆ ಖುದ್ದು ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರು ಮುಡಾಗೆ ಪತ್ರ ಬರೆದಿದ್ದಾರೆ.
ಇನ್ನು ಪತ್ನಿಯ ಈ ನಿರ್ಧಾರಕ್ಕೆ ಸ್ವತಃ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ನನ್ನ ವಿರುದ್ಧ ನಡೆಯುತ್ತಿರುವ ರಾಜಕೀಯ ಷಡ್ಯಂತ್ರದಿಂದ ನನ್ನ ಪತ್ನಿ ನೊಂದು ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ನನ್ನ ಪತ್ನಿಯ ನಿರ್ಧಾರ ನನಗೂ ಆಶ್ಚರ್ಯ ತಂದಿದೆ ಎಂದಿದ್ದಾರೆ.
ಸೈಟ್ ವಾಪಸ್ ನೀಡುವ ಬಗ್ಗೆ ಪತ್ನಿ ಕೈಗೊಂಡ ನಿರ್ಧಾರದ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ನನ್ನ ವಿರುದ್ದ ರಾಜಕೀಯ ದ್ವೇಷ ಸಾಧನೆಗಾಗಿ ವಿರೋಧ ಪಕ್ಷಗಳು ಸುಳ್ಳು ದೂರನ್ನು ಸೃಷ್ಟಿಸಿ ನನ್ನ ಕುಟುಂಬವನ್ನು ವಿವಾದಕ್ಕೆ ಎಳೆದು ತಂದಿರುವುದು ರಾಜ್ಯದ ಜನತೆಗೂ ತಿಳಿದಿದೆ. ಈ ಅನ್ಯಾಯಕ್ಕೆ ತಲೆಬಾಗದೆ ಹೋರಾಟ ಮಾಡಬೇಕೆಂಬುದು ನನ್ನ ನಿಲುವಾಗಿತ್ತು. ಆದರೆ ನನ್ನ ವಿರುದ್ಧ ನಡೆಯುತ್ತಿರುವ ರಾಜಕೀಯ ಷಡ್ಯಂತ್ರದಿಂದ ನೊಂದಿರುವ ನನ್ನ ಪತ್ನಿ ಈ ನಿವೇಶನಗಳನ್ನು ಹಿಂದಿರುಗಿಸುವ ನಿರ್ಧಾರ ಕೈಗೊಂಡು, ನನಗೂ ಆಶ್ಚರ್ಯ ಉಂಟು ಮಾಡಿದೆ ಎಂದು ಸಿಎಂ ಸಿದ್ದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ನನ್ನ 4 ದಶಕಗಳ ರಾಜಕಾರಣದಲ್ಲಿ ನನ್ನ ಮಡದಿ ಮಧ್ಯಪ್ರವೇಶಿಸಿರಲಿಲ್ಲ. ಕುಟುಂಬಕ್ಕಷ್ಟೆ ಸೀಮಿತವಾಗಿದ್ದ ನನ್ನ ಪತ್ನಿ ಇವತ್ತು ಇಂಥಾ ನಿರ್ಧಾರ ಮಾಡಿದ್ದಾರೆ. ನನ್ನ ವಿರುದ್ಧದ ದ್ವೇಷ ರಾಜಕಾರಣಕ್ಕೆ ಬಲಿಯಾಗಿ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದಾರೆ. ಅವರು ನೋವು ಅನುಭವಿಸುತ್ತಿರೋದು ನೋಡಿ ನನಗೂ ವಿಷಾದ ಇದೆ. ಹೀಗಿದ್ದರೂ ಸೈಟ್ ವಾಪಸ್ ನೀಡುವ ನನ್ನ ಪತ್ನಿಯ ನಿರ್ಧಾರ ಗೌರವಿಸುತ್ತೇನೆ ಎಂದು ಟ್ವೀಟ್ -Xನಲ್ಲಿ ಸಿಎಂ ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : 14 ಸೈಟ್ ಹಿಂದಿರುಗಿಸಲು ನಿರ್ಧಾರ – ಮುಡಾಗೆ ಸಿಎಂ ಪತ್ನಿ ಬರೆದ ಪತ್ರದಲ್ಲೇನಿದೆ?