ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಭಾರೀ ವಿವಾದದ ಬಿರುಗಾಳಿ ಎಬ್ಬಿಸಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಬದಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಸಿಎಂ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ಕೋರಿರುವ ಅರ್ಜಿಯಲ್ಲಿ ಆರೋಪಗಳ ಕುರಿತು ವಿವರಣೆ ನೀಡುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದ್ದಾರೆ.
ಜುಲೈ 27ರಂದೇ ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರು ನೋಟಿಸ್ ನೀಡಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು (ಪ್ರಾಸಿಕ್ಯೂಷನ್) ಅನುಮತಿ ಕೋರಿ ವಕೀಲ ಟಿ.ಜೆ. ಅಬ್ರಹಾಂ ಅವರು 22 ಪುಟಗಳ ಅರ್ಜಿಯನ್ನು ಜುಲೈ 26ರಂದು ರಾಜ್ಯಪಾಲರಿಗೆ ಸಲ್ಲಿಸಿದ್ದರು. ‘ಮುಖ್ಯಮಂತ್ರಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಅಕ್ರಮ ನಡೆಸಿದ್ದಾರೆ.
ಇದರಿಂದ ರಾಜ್ಯದ ಬೊಕ್ಕಸಕ್ಕೆ ₹55.80 ಕೋಟಿ ನಷ್ಟವಾಗಿದೆ. ಈ ಬಗ್ಗೆ ತನಿಖೆಗಾಗಿ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ 7, 9, 11, 12 ಮತ್ತು 13ನೇ ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸುವ ಅಗತ್ಯವಿದೆ ಎಂದು ಅರ್ಜಿಯಲ್ಲಿ ಅಬ್ರಹಾಂ ವಿವರಿಸಿದ್ದರು.
ಅಬ್ರಹಾಂ ಅವರಿಂದ ಸುಮಾರು ಒಂದೂವರೆ ಗಂಟೆ ವಿವರಣೆ ಪಡೆದಿದ್ದ ರಾಜ್ಯಪಾಲರು, ಕೆಲವು ವಿಷಯಗಳಲ್ಲಿ ಮತ್ತಷ್ಟು ಸ್ಪಷ್ಟನೆ ಕೇಳಿದ್ದರು. ದಾಖಲೆಗಳನ್ನು ಕಾನೂನು ತಜ್ಞರಿಗೆ ಕಳುಹಿಸಿದ್ದ ರಾಜ್ಯಪಾಲರು, ಈ ಬಗ್ಗೆ ಮುಂದೆ ಏನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆಯೂ ಸಮಾಲೋಚನೆ ನಡೆಸಿದ್ದರು ಎಂದು ಹೇಳಲಾಗಿತ್ತು.
ಇನ್ನು ಸಿದ್ದರಾಮಯ್ಯ ವಿರುದ್ಧ ಜುಲೈ 18ರಂದು ಲೋಕಾಯುಕ್ತಕ್ಕೆ ಅಬ್ರಹಾಂ ದೂರು ನೀಡಿದ್ದರು. ಸಿಎಂ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ರಾಜ್ಯಪಾಲರ ಅನುಮತಿ ಅಗತ್ಯವಿದೆ. ಈ ಕಾರಣಕ್ಕಾಗಿ, ಅಬ್ರಹಾಂ ರಾಜ್ಯಪಾಲರ ಮೊರೆ ಹೋಗಿದ್ದರು. ಸಿಎಂ ವಿರುದ್ಧ ದೂರು ಬಂದ್ರೆ ಪತ್ರ ಅಥವಾ ನೋಟಿಸ್ ಮೂಲಕ ವಿವರಣೆ ಕೇಳಬಹುದು. ಹೀಗಾಗಿ ಅರ್ಜಿಯಲ್ಲಿರುವ ಆರೋಪಗಳಿಗೆ ರಾಜ್ಯಪಾಲರು ಸ್ಪಷ್ಟನೆ ಕೇಳಿದ್ದಾರೆ.
ಇದನ್ನೂ ಓದಿ : ಪುನೀತ್ ಕೆರೆಹಳ್ಳಿ ಬೆತ್ತಲು ಮಾಡಿದ ಪ್ರಕರಣ – ACP ಚಂದನ್ ಕುಮಾರ್ ವಿರುದ್ಧ ಪ್ರತಾಪ್ ಸಿಂಹ ದೂರು..!