ನವದೆಹಲಿ : ಸಂಸತ್ತಿನ ಮುಂಗಾರು ಅಧಿವೇಶನವು ಇಂದಿನಿಂದ (ಜು.22) ಆರಂಭವಾಗಿ ಆಗಸ್ಟ್ 12 ರವರೆಗೆ 19 ಅಧಿವೇಶನಗಳೊಂದಿಗೆ ಕೊನೆಯಾಗಲಿದೆ. ಇಂದು ಅಧಿವೇಶನದ ಮೊದಲ ದಿನವಾಗಿದ್ದು, ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷಾ ವರದಿಯನ್ನು ಮಂಡಿಸಲಿದ್ದಾರೆ. ಹಾಗೂ ಈ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಒಟ್ಟು 6 ಮಸೂದೆಗಳನ್ನು ಮಂಡಿಸಲು ಸಿದ್ಧತೆ ಮಾಡಿಕೊಂಡಿದೆ.
ಇನ್ನು ಮೋದಿ 3.0 ಸರ್ಕಾರದ ನೂತನ ಬಜೆಟ್ಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಇದೇ ವರ್ಷ ಫೆ.1 ರಂದು ಮಧ್ಯಂತರ ಬಜೆಟ್ ಮಂಡನೆ ಮಾಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ(ಜು.23) ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಪೂರ್ಣ ಬಜೆಟ್ ಮಂಡನೆ ಮಾಡಲಿದ್ದಾರೆ. ಇದು ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ 7ನೇ ಬಜೆಟ್ ಆಗಿದ್ದು, ಈ ಮೂಲಕ ಅವರ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ. ಇಲ್ಲಿಯವರೆಗೆ ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿಯವರ ಹೆಸರಿನಲ್ಲಿದೆ. ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ ಮಂಡಿಸುವ ಬಜೆಟ್ನೊಂದಿಗೆ ಈ ದಾಖಲೆಯನ್ನು ಮುರಿಯಲಿದ್ದಾರೆ.
ನಾಳೆ ಕೇಂದ್ರ ಸರ್ಕಾರದ ಪೂರ್ಣ ಬಜೆಟ್ ಮಂಡನೆ ಆಗಲಿದ್ದು, ರೈತರಿಗೆ ಸಿಗುವ ಕಿಸಾನ್ ಸಮ್ಮಾನ್ ಯೋಜನೆಯ ಹಣ ಹೆಚ್ಚುವರಿಯಾಗಲಿದೆ ಎನ್ನಲಾಗಿದೆ. ಇದರ ಜೊತೆಗೆ ಮಹಿಳೆಯರು, ಕಾರ್ಮಿಕರು ಸೇರಿದಂತೆ ಅನೇಕ ಮಧ್ಯಮ ವರ್ಗದ ಜನತೆಗೆ ಬಜೆಟ್‌ನಲ್ಲಿ ಬಂಪರ್ ಆಫರ್ ಘೋಷಣೆಯಾಗಲಿದೆ ಎಂಬ ನಿರೀಕ್ಷೆಯಿದೆ. ಹಾಗಾಗಿ ಎಲ್ಲರ ಚಿತ್ತ ಕೇಂದ್ರ ಸರ್ಕಾರದ ಬಜೆಟ್‌ನತ್ತ ನೆಟ್ಟಿದೆ.
ಬಜೆಟ್ ಮಂಡನೆ ಬಳಿಕ ಬಜೆಟ್ ವಿರುದ್ಧ ವಿಪಕ್ಷಗಳು ಕಿಡಿಕಾರುವ ಸಂಭವವಿದ್ದು, ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಅಧಿವೇಶನದಲ್ಲಿ ಏನೆಲ್ಲಾ ಚರ್ಚೆ ಮಾಡಲು ಸಜ್ಜಾಗಿದ್ದಾರೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಇಂದು ಸೂರಜ್ ರೇವಣ್ಣ ಜಾಮೀನು ಆದೇಶ ಪ್ರಕಟಿಸಲಿರೋ ಕೋರ್ಟ್..!