ಬೆಂಗಳೂರು : ಜಾತಿ ನಿಂದನೆ ಮತ್ತು ಬೆದರಿಕೆ ಪ್ರಕರಣದಲ್ಲಿ ಅರೆಸ್ಟ್ ಆಗಿರೊ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರನ್ನು ನ್ಯಾಯಾಧೀಶರು ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.
ಮೆಡಿಕಲ್ ಟೆಸ್ಟ್ ಮಾಡಿಸಿದ ಬಳಿಕ ಪೊಲೀಸರು ಮುನಿರತ್ನ ಅವರನ್ನು ರಾತ್ರಿ 2.30ಕ್ಕೆ ಜಕ್ಕೂರಿನ ನ್ಯಾಯಾಧೀಶರ ನಿವಾಸಕ್ಕೆ ಹಾಜರು ಪಡಿಸಿದ್ದರು. ಈ ವೇಳೆ ವಿಚಾರಣೆಗಾಗಿ ಪೊಲೀಸರು ಒಂದು ವಾರ ಕಸ್ಟಡಿಗೆ ಕೊಡುವಂತೆ ಮನವಿ ಮಾಡಿದ್ದರು. ವಿಚಾರಣೆ ನಡೆಸಿ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಆದೇಶಿಸಿದ್ದಾರೆ.
ಬಿಬಿಎಂಪಿ ಗುತ್ತಿಗೆದಾರನಿಗೆ ಲಂಚ ಕೇಳಿದ್ದಲ್ಲದೇ ಜಾತಿ ನಿಂದನೆ ಹಾಗೂ ಜೀವಬೆದರಿಕೆ ಹಾಕಿದ್ದಕ್ಕೆ ಶಾಸಕ ಮುನಿರತ್ನ ವಿರುದ್ಧ ದೂರು ದಾಖಲಾಗಿತ್ತು. ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಶಾಸಕ ಮುನಿರತ್ನ ಬಂಧನದ ಭೀತಿಯಿಂದ ಕೋಲಾರ ಮಾರ್ಗವಾಗಿ ಆಂಧ್ರ ಪ್ರದೇಶದ ಚಿತ್ತೂರಿಗೆ ತೆರಳುತ್ತಿದ್ದರು. ಇನ್ನು ಮುನಿರತ್ನ ಅವರ ಮೇಲೆ ನಿಗಾ ವಹಿಸಿದ್ದ ಪೊಲೀಸರು, ಶಾಸಕರ ಕಾರನ್ನು ಚೇಸ್ ಮಾಡಿ ಕಾರು ಅಡ್ಡಗಟ್ಟಿ ಬಂಧಿಸಿದ್ದರು. ಆಂಧ್ರಪ್ರದೇಶಕ್ಕೆ ಪರಾರಿಯಾಗುತ್ತಿರುವ ಕುರಿತು ಮೊಬೈಲ್ ಟವರ್ ಲೊಕೇಶನ್ ಟ್ರೇಸ್ ಮಾಡಿ ಪೊಲೀಸರು ಹೈವೈಯಲ್ಲಿ ಕಾರು ನಿಲ್ಲಿಸಿ ಮುನಿರತ್ನರನ್ನು ವಶಕ್ಕೆ ಪಡೆದುಕೊಂಡಿದ್ದರು.
ಇದನ್ನೂ ಓದಿ : ಮುನಿರತ್ನ ಅರೆಸ್ಟ್ ಆಗಿದ್ದು ಸತ್ಯಕ್ಕೆ ಸಿಕ್ಕ ಜಯ – ದೂರುದಾರ ವೇಲು ನಾಯ್ಕರ್..!