ಬೆಂಗಳೂರು : ಮಸಾಜ್‌ಗಾಗಿ ಆನ್‌ಲೈನ್ ಬುಕಿಂಗ್ ಮೂಲಕ ಮಹಿಳಾ ಥೆರಪಿಸ್ವ್ ಕರೆಸಿಕೊಂಡು ಪೊಲೀಸ್ ಎಂದು ನಂಬಿಸಿ ಆಕೆಯಿಂದ 1.5 ಲಕ್ಷ ರೂ. ಸುಲಿಗೆ ಮಾಡಿದ್ದ ಆರೋಪಿಯನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹೇಂದ್ರ ಕುಮಾರ್ (33) ಬಂಧಿತ ಆರೋಪಿ.
ಮಸಾಜ್ ಮಾಡಿಸಿಕೊಳ್ಳಲೆಂದು ಜುಲೈ 3ರಂದು ಬಂಧಿತ ಆರೋಪಿ ಮಹೇಂದ್ರಕುಮಾರ್ ತನ್ನ ಹೆಸರು ಸುರೇಶ್ ಎಂಬುದಾಗಿ ನಮೂದಿಸಿ, ಆನ್‌ಲೈನ್ ಮೂಲಕ 25 ವರ್ಷದ ಮಹಿಳಾ ಥೆರಪಿಸ್ಟ್ ಬುಕ್ ಮಾಡಿದ್ದ. ಥೆರಪಿಸ್ಟ್‌ಗೆ ರಾಮಮೂರ್ತಿ ನಗರದ ಅಪಾರ್ಟ್‌ಮೆಂಟ್‌ವೊಂದರ ಮುಂದೆ ಬರುವಂತೆ ತಿಳಿಸಿದ್ದ. ಅದರಂತೆ ಮಹಿಳಾ ಥೆರಪಿಸ್ಟ್ ರಾತ್ರಿ 10.30ರ ಸುಮಾರಿಗೆ ಅಲ್ಲಿಗೆ ಬಂದಿದ್ದರು.
ಬಳಿಕ ಅಪಾರ್ಟ್‌ಮೆಂಟ್‌ನಿಂದ ಹೊರಗಡೆ ಬಂದು, ತನ್ನ ಕಾರಿನಲ್ಲಿ ಯುವತಿಯನ್ನು ಕರೆದುಕೊಂಡು ತೆರಳಿದ್ದ. ಕಾರು ಸುಮಾರು ಒಂದು ಕಿಲೋಮೀಟರ್ ಪ್ರಯಾಣಿಸಿದ ಬಳಿಕ, ತಾನು ಪೊಲೀಸ್ ಅಧಿಕಾರಿಯಾಗಿರುವೆ. ಅನೈತಿಕ ಚಟುವಟಿಕೆ ನಡೆಸುತ್ತಿದ್ದೀರಾ ಎಂದು ಸುಳ್ಳು ಕೇಸ್ ಹಾಕಿ ಜೈಲಿಗೆ ಕಳಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಅಲ್ಲದೆ, ಯುವತಿ ಮೇಲೆ ಹಲ್ಲೆ ಮಾಡಿ 10 ಲಕ್ಷ ರೂ. ನೀಡಬೇಕು, ಇಲ್ಲದಿದ್ದರೆ ಕೇಸ್ ಹಾಕುತ್ತೇನೆ ಎಂದು ಬೆದರಿಸಿದ್ದ.
ಆರೋಪಿಯ ಈ ಬೆದರಿಕೆಯಿಂದ ಗಾಬರಿಗೊಂಡ ಯುವತಿ, ತನ್ನ ಸ್ನೇಹಿತನಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಬಳಿಕ ಸ್ನೇಹಿತ ಆರೋಪಿ ಹೇಳಿದ ಯುಪಿಐ ನಂಬರ್‌ಗೆ 1.50 ಲಕ್ಷ ರೂ.ವರ್ಗಾಯಿಸಿದ್ದ. ಬಳಿಕ ಮಹೇಂದ್ರಕುಮಾರ್ ಯುವತಿಯನ್ನು ಇಡೀ ರಾತ್ರಿ ಕಾರಿನಲ್ಲಿ ಹೆಬ್ಬಾಳ ಸೇರಿದಂತೆ ಹಲವೆಡೆ ಸುತ್ತಾಡಿಸಿದ್ದ ಬೆಳಗಿನ ಜಾವ ಏರ್‌ಪೋರ್ಟ್ ಬಳಿ ಇಳಿಸಿ, ಈ ಕೂಡಲೇ ಸ್ವಂತ ಊರಿಗೆ ಹೋಗಬೇಕು.
ಈ ವಿಚಾರವನ್ನು ಯಾರೊಂದಿಗೂ ಹೇಳಿಕೊಳ್ಳಬಾರದು ಎಂದು ಬೆದರಿಕೆ ಹಾಕಿದ್ದ. ಆತನ ಬಂಧನದಿಂದ ಮುಕ್ತವಾದ ನಂತರ ನಿಟ್ಟುಸಿರು ಬಿಟ್ಟ ಸಂತ್ರಸ್ತೆ, ಘಟನೆ ಸಂಬಂಧ ದೂರು ನೀಡಿದ್ದರು. ಇದೀಗ ಸಂತ್ರಸ್ತೆ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ ಜನರಿಗೆ ಗುಡ್ ನ್ಯೂಸ್ - ಶೀಘ್ರವೇ ಪೀಣ್ಯ ಫ್ಲೈ ಓವರ್ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್..!