ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪುಂಡರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ. ಹೌದು, ರಾಜ್ಯ ರಾಜಧಾನಿಯ ರಸ್ತೆ ರಸ್ತೆಯಲ್ಲಿಯೂ ರೋಡ್ ರೇಜ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಂತೆ ಇದೀಗ ಇಂಥದೇ ಒಂದು ಪ್ರಕರಣದಲ್ಲಿ ಓರ್ವ ಅಮಾಯಕ ಯುವಕನ ಕೊಲೆ ನಡೆದಿದೆ. ಡೆಲಿವರಿ ಬಾಯ್, ನಂಜಪ್ ಲೇಔಟ್ ನಿವಾಸಿ ಮಹೇಶ್ (21) ಎಂಬಾತ ಮೃತ ಯುವಕ.
ಮೂಲತಃ ಆಂಧ್ರದ ವಿ.ಕೋಟಾದ ಮಹೇಶ್, ನಿನ್ನೆ ರಾತ್ರಿ 7.15ಕ್ಕೆ GKVK ರೋಡ್ನಲ್ಲಿ ಸ್ನೇಹಿತರ ಜೊತೆ ಬೈಕ್ನಲ್ಲಿ ಟೀ ಕುಡಿಯಲು ಹೋಗ್ತಿದ್ದ ವೇಳೆ ಕಾರಿಗೆ ಹಿಂಬದಿಯಿಂದ ಬೈಕ್ ಟಚ್ ಆಗಿತ್ತು. ಈ ಕಾರಣಕ್ಕೆ ಕಾರಿನಲ್ಲಿದ್ದ ಅರವಿಂದ, ಕೇಶವ್ ಇಳಿದು ಗಲಾಟೆ ಮಾಡಿದ್ರು. ಗಲಾಟೆ ಬಳಿಕ ಘಟನೆ ಸ್ಥಳದಿಂದ ಮಹೇಶ್ ಹೋಗಲು ಯತ್ನಿಸಿದ್ದ, ಈ ವೇಳೆ ಸಿಟ್ಟಲ್ಲಿ ಅರವಿಂದ್, ಕೇಶವ್ ಬೈಕ್ ಚಾಲಕ ಮಹೇಶನನ್ನ ಚೇಸ್ ಮಾಡಿಕೊಂಡು ಹೋಗಿದ್ದಾರೆ.
ರಭಸವಾಗಿ ಮುಂದೆ ಹೋಗುತ್ತಿದ್ದಾಗ ಮಹೇಶ್ ಬೈಕ್ಗೆ ಹಿಂದೆಯಿಂದ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಮಹೇಶ್ ತಲೆ ರಸ್ತೆಯಲ್ಲಿದ್ದ ಪೋಲ್ ಹಾಗೂ ಗೋಡೆಗೆ ಬಡಿದಿತ್ತು. ಹೆಲ್ಮೆಟ್ ಇಲ್ಲದ ಕಾರಣ ಮಹೇಶ್ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸದ್ಯ ಅರವಿಂದ ಹಾಗೂ ಕೇಶವ್ನನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದು, ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ.
ಒಟ್ಟಿನಲ್ಲಿ ಕೋಟ್ಯಂತರ ವಾಹನಗಳಿರುವ ಬೆಂಗಳೂರಿನಲ್ಲಿ ನಿತ್ಯವೂ ಸಣ್ಣ ಪುಟ್ಟ ಅಪಘಾತಗಳು ಸಾಮಾನ್ಯವಾಗಿಬಿಟ್ಟಿದೆ. ಆದರೆ ಇದನ್ನೇ ದೊಡ್ಡದು ಮಾಡಿ, ತಾಳ್ಮೆ ಕಳೆದುಕೊಂಡರೆ ಏನೆಲ್ಲಾ ಅನಾಹುತ ಆಗಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.
ಇದನ್ನೂ ಓದಿ : ಮಂಡ್ಯ : ಸ್ಕ್ರೂ ಡ್ರೈವರ್ನಿಂದ ಚುಚ್ಚಿ ಪತಿಯಿಂದಲೇ ಪತ್ನಿಯ ಭೀಕರ ಹತ್ಯೆ..!