ಚಿಕ್ಕಮಗಳೂರು\ಶೃಂಗೇರಿ : ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ ಮತ್ತೊಂದು ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ಮಹಾ ಜಗದ್ಗುರು ಭಾರತೀ ತೀರ್ಥ ಶ್ರೀಗಳ ಸನ್ಯಾಸತ್ವಕ್ಕೆ 50 ವರ್ಷ ಹಿನ್ನೆಲೆಯಲ್ಲಿ ಶಕ್ತಿ ಪೀಠ ಶೃಂಗೇರಿಯಲ್ಲಿ ಇಂದು ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಶ್ರೀ ಮಠದ ನರಸಿಂಹ ವನದ ಭವ್ಯ ವೇದಿಕೆಯಲ್ಲಿ ಸ್ತೋತ್ರ ತ್ರಿವೇಣಿಯ ಮಹಾಸಮರ್ಪಣೆ ಕಾರ್ಯಕ್ರಮ ಈಗಾಗಲೇ ಆರಂಭಗೊಂಡಿದೆ. ಏಕಕಾಲದಲ್ಲಿ 50,000 ಜನ ಮಂತ್ರ, ಸ್ತೋತ್ರ ಪಠಣ ಮಾಡುವ ಮೂಲಕ ಮಹಾ ಜಗದ್ಗುರುಗಳಿಗೆ ಭಕ್ತಿ ಸಮರ್ಪಿಸಿದ್ದಾರೆ. ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರ ಮುಂದಾಳತ್ವದಲ್ಲಿ ಈ ಭವ್ಯ ಕಾರ್ಯಕ್ರಮ ನಡೆಯುತ್ತಿದೆ.
ಶೃಂಗೇರಿ ಶಾರದಾ ಪೀಠದ 36ನೇ ಪೀಠಾಧಿಪತಿಗಳಾದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರು, ಅನೇಕ ಉದಾತ್ತ ಗುಣಗಳ ಗಣಿಯಾಗಿರುವ, ಅನೇಕ ಶಾಸ್ತ್ರಗಳಲ್ಲಿ ವಿದ್ವತ್ ಪ್ರೌಢಿಮೆಯನ್ನು ಹೊಂದಿರುವ ಜಗದ್ಗುರುಗಳವರು ತಮ್ಮ ಅಪಾರವಾದ ಕಾರುಣ್ಯ ಮತ್ತು ವಾತ್ಸಲ್ಯದಿಂದ ಶಿಷ್ಯ ಕೋಟಿಯನ್ನು ಅನುಗ್ರಹಿಸುತ್ತಿದ್ದಾರೆ. ಶ್ರೀ ಮಹಾಸ್ವಾಮಿಗಳು ೧೧-೧೧-೧೯೭೪ ಆನಂದನಾಮ ಸಂವತ್ಸರದ ಆಶ್ವಯುಜ ಕೃಷ್ಣ ದ್ವಾದಶಿಯಂದು ಸಂನ್ಯಾಸಾಶ್ರಮವನ್ನು ಸ್ವೀಕರಿದರು. ಪ್ರಸ್ತುತ ಅವರ ಸಂನ್ಯಾಸ ಸ್ವೀಕಾರದ 50ನೇ ವರ್ಷದ ಸ್ವರ್ಣ ಮಹೋತ್ಸವವನ್ನು ‘ಸುವರ್ಣಭಾರತೀ’ ಎಂಬ ಹೆಸರಿನಲ್ಲಿ ವರ್ಷಪೂರ್ತಿ ಆಚರಿಸಬೇಕೆಂದು ತತ್ಕರಕಮಲ ಸಂಜಾತರಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರು ಸಂಕಲ್ಪಿಸಿದ್ದರು.
ಇಂದು ನಡೆಯುತ್ತಿರುವ ಶುಭ ಸಮಾರಂಭದಲ್ಲಿ ಲೋಕ ಕ್ಷೇಮಾರ್ಥವಾಗಿ ಅನೇಕ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳು ಮತ್ತು ವಿಶೇಷವಾದ ಶಂಕರ ಸ್ತೋತ್ರ ಪಠಣಗಳು ಮುಂತಾದ ಅನೇಕ ಕಾರ್ಯಕ್ರಮಗಳನ್ನು ವರ್ಷಪೂರ್ತಿ ಆಚರಿಸಲಾಗುತ್ತಿದೆ. ಪ್ರಸ್ತುತ ಉಭಯ ಜಗದ್ಗುರುಗಳವರ ಅಪ್ಪಣೆಯಂತೆ ಶ್ರೀ ಮಠದ ಶ್ರೀ ಶಂಕರ ತತ್ವಪ್ರಸಾರ ಅಭಿಯಾನ ಮತ್ತು ವೇದಾಂತಭಾರತೀ ಸಂಸ್ಥೆಗಳು ಶ್ರೀ ಶಂಕರಾಚಾರ್ಯರು ರಚಿಸಿದ ಕಲ್ಯಾಣವೃಷ್ಟಿಸ್ತವ, ಶಿವಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರ ಮತ್ತು ಶ್ರೀ ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರಗಳ ವಿಶೇಷ ಅಭಿಯಾನವನ್ನು ಕೈಗೊಂಡಿದ್ದು, ಇದರ ಮಹಾಸಮರ್ಪಣೆಯನ್ನು ಇಂದು (ಶನಿವಾರ) ಶೃಂಗೇರಿ ಶ್ರೀ ಮಠದಲ್ಲಿ ಆಯೋಜಿಸಲಾಗಿದೆ.
20 ಎಕ್ರೆ ಪ್ರದೇಶದಲ್ಲಿ ಸಮಾರಂಭ : ಶ್ರೀ ಮಠದ ನರಸಿಂಹ ವನದ ಸುಮಾರು 20 ಎಕರೆಯ ನಗರದಲ್ಲಿ ನಡೆಯುತ್ತಿರುವ ಸಮಾರಂಭಕ್ಕೆ ಪೂರ್ವಭಾವಿಯಾಗಿ ಶ್ರೀ ಮಠದಿಂದ ಸಕಲ ಸಿದ್ಧತೆಗಳ ಕಾರ್ಯಗಳು ಸಿದ್ದಗೊಂಡಿದೆ. ಐತಿಹಾಸಿಕ ಗಳಿಗೆಯನ್ನು ಸಾಕ್ಷಾತ್ಕರಿಸುವ ಮಹಾಸಮರ್ಪಣೆ ಕಾರ್ಯಕ್ರಮಕ್ಕೆ ನಾನಾ ಪ್ರಾಂತ್ಯಗಳಿಂದ ಸುಮಾರು 50 ಸಾವಿರ ಆಸ್ತಿಕ ಬಾಂಧವರು ಆಗಮಿಸಿದ್ದಾರೆ. ಸಮಾರಂಭಕ್ಕಾಗಿ 140/800 ಉದ್ದದ ಬೃಹತ್ ವೇದಿಕೆ, ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರಗಳು ನೋಡುಗರ ಗಮನ ಸೆಳೆಯುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಸುಮಾರು 50 ಸಾವಿರ ಜನರು ಬೃಹತ್ ವೇದಿಕೆಯಲ್ಲಿ ಏಕಕಾಲಕ್ಕೆ ಸ್ತೋತ್ರ ತ್ರಿವೇಣಿಯ ಮೂರು ಶ್ಲೋಕಗಳನ್ನು ಪಠಿಸಿ ಜಗನ್ಮಾತೆ ಶಾರದೆ ಹಾಗೂ ಜಗದ್ಗುರುಗಳಿಗೆ ಸಮರ್ಪಣೆ ಮಾಡಿದ್ದಾರೆ. ಕಾರ್ಯಕ್ರಮ ಜಗದ್ಗುರುಗಳ ಅನುಗ್ರಹ ಭಾಷಣದೊಂದಿಗೆ ಸಂಪನ್ನಗೊಳ್ಳಲಿದೆ.
ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗಿ : ಭಕ್ತರಿಗೆ ಶೃಂಗೇರಿಗೆ ಬರಲು ಸುಮಾರು 700ಕ್ಕೂ ಹೆಚ್ಚು ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ. ಊಟದ ವ್ಯವಸ್ಥೆಗಾಗಿ 300ಕ್ಕೂ ಹೆಚ್ಚು ಕೌಂಟರ್, ಕುಡಿಯುವ ನೀರಿನ ವ್ಯವಸ್ಥೆ, ತುರ್ತು ಚಿಕಿತ್ಸಾ ಘಟಕ, ಮಾಹಿತಿ ಕೇಂದ್ರದ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ. ಸ್ಥಳದಲ್ಲಿ ಸುಮಾರು ಮೂರು ಸಾವಿರಕ್ಕೂ ಸ್ವಯಂಸೇವಕರ ತಂಡ ಸೇವಾಕಾರ್ಯವನ್ನು ಮಾಡುತ್ತಿದೆ.
ಸುಮಾರು 300ಕ್ಕೂ ಹೆಚ್ಚು ಪೋಲಿಸ್ ಹಾಗೂ ಗೃಹರಕ್ಷಕ ತಂಡ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಎಡೆತೊರೆ, ಶೃಂಗೇರಿ ಶಿವಗಂಗಾಮಠ, ನೆಲೆಮಾವು , ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮ, ಆವನಿ ಶೃಂಗೇರಿಮಠ, ಕರ್ಕಿ, ಹಳದೀಪುರ, ಆನೆಗುಂದಿ ಮಠಗಳ ಸ್ವಾಮೀಜಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಶಿವರಾಜ್ ಸಿಂಗ್ ಚವ್ಹಾಣ್, ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ, ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾಧಿಕಾರಿ ,ಎಸ್ಪಿ ಮುಂತಾದ ಗಣ್ಯರು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ : ರಾಮ ಮಂದಿರಕ್ಕೆ ವರ್ಷದ ಸಂಭ್ರಮ – ಅಯೋಧ್ಯೆಯಲ್ಲಿ ಇಂದಿನಿಂದ ಮೂರು ದಿನ ಅದ್ದೂರಿ ವಾರ್ಷಿಕೋತ್ಸವ!