ನವದೆಹಲಿ: ಕೆಲಸಗಾರರು ತಮ್ಮ ಮನೆಯಲ್ಲಿದ್ದು ಎಷ್ಟು ಹೊತ್ತು ಅಂತ ಕಟ್ಟಿಕೊಂಡ ಹೆಂಡತಿಯ ಮುಖ ನೋಡ್ತೀರಾ..? ನಿಮ್ಮ ನಿಮ್ಮ ಕಚೇರಿಗೆ ಹೋಗಿ 1 ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಿ ಎಂದು ಹೇಳಿಕೆ ನೀಡುವ ಮೂಲಕ ಲಾರ್ಸೆನ್ & ಟೂಬ್ರೊ (ಎಲ್ & ಟಿ) ಕಂಪನಿ ಅಧ್ಯಕ್ಷ ಎಸ್.ಎನ್.ಸುಬ್ರಮಣಿಯನ್ ಹೊಸ ವಿವಾದ ಹುಟ್ಟು ಹಾಕಿದ್ದಾರೆ.
ದೇಶದ ಅಭಿವೃದ್ಧಿಗಾಗಿ ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿಕೆ ನೀಡಿ ಇನ್ಫೋಸಿಸ್‌ನ ನಾರಾಯಣಮೂರ್ತಿ ಚರ್ಚೆ ಹುಟ್ಟುಹಾಕಿದ್ದರು. ನಾರಾಯಣಮೂರ್ತಿ ಅವರ ಬೆನ್ನಲ್ಲೇ ಎಲ್ ಅಂಡ್ ಟಿ ಚೇರ್ಮನ್ ಎಸ್ ಎನ್ ಸುಬ್ರಮಣಿಯನ್ 1 ವಾರಕ್ಕೆ 90 ಗಂಟೆಗಳ ಕಾಲ ಕೆಲಸದ ಹೇಳಿಕೆ ನೀಡಿದ್ದಾರೆ. ಎಲ್ & ಟಿ ತನ್ನ ಉದ್ಯೋಗಿಗಳಿಗೆ ಶನಿವಾರದಂದು ಕೆಲಸ ಮಾಡಬೇಕು ಎಂದು ಏಕೆ ಆದೇಶಿಸಿದೆ ? ಎಂಬ ಪ್ರಶ್ನೆಗೆ ಸುಬ್ರಹ್ಮಣ್ಯನ್ ಪ್ರತಿಕ್ರಿಯೆ ನೀಡಿದ್ದಾರೆ. ನಿಜ ಹೇಳಬೇಕೆಂದರೆ, ಭಾನುವಾರದಂದೂ ನಿಮ್ಮಿಂದ ಕೆಲಸ ಮಾಡಿಸಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಲು ವಿಷಾದಿಸುತ್ತೇನೆ. ಭಾನುವಾರವೂ ನೀವು ಕೆಲಸ ಮಾಡಿದರೆ ನನಗೆ ಹೆಚ್ಚು ಸಂತೋಷ. ಏಕೆಂದರೆ ನಾನು ಭಾನುವಾರವೂ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ರಜೆ ತೆಗೆದುಕೊಂಡು ಮನೆಯಲ್ಲಿ ಇರುವುದರಿಂದ ಉದ್ಯೋಗಿಗಳಿಗೆ ಏನು ಸಿಗುತ್ತದೆ? ನೀವು ಮನೆಯಲ್ಲಿ ಕುಳಿತು ಏನು ಮಾಡುತ್ತೀರಿ? ನೀವು ಎಷ್ಟು ಹೊತ್ತು ನಿಮ್ಮ ಹೆಂಡತಿ ಮುಖವನ್ನೇ ನೋಡುತ್ತಾ ಕೂರಬಹುದು? ಹೆಂಡತಿಯರು ತಮ್ಮ ಗಂಡಂದಿರನ್ನು ಎಷ್ಟು ಹೊತ್ತು ದಿಟ್ಟಿಸಿ ನೋಡಬಹುದು? ಅದಕ್ಕೆ ಬದಲು, ಕಚೇರಿಗೆ ಹೋಗಿ ಕೆಲಸ ಮಾಡಿ ಎಂದು ತಿಳಿಸಿದ್ದಾರೆ.
ಚೀನಾದ ಸಮರ್ಪಕ ಕೆಲಸದ ನೀತಿಯಿಂದಾಗಿ ಅಮೆರಿಕವನ್ನು ಮೀರಿಸುವಂತಾಗಿದೆ. ಚೀನಿಯರು ವಾರಕ್ಕೆ 90 ಗಂಟೆಗಳು ಕೆಲಸ ಮಾಡುತ್ತಾರೆ. ಆದರೆ ಅಮೆರಿಕನ್ನರು ವಾರಕ್ಕೆ 50 ಗಂಟೆಗಳು ಮಾತ್ರ ಕೆಲಸ ಮಾಡುತ್ತಾರೆ. ಹೀಗಾಗಿ, ನಾನು ನಮ್ಮ ಸಂಸ್ಥೆಯ ಉದ್ಯೋಗಿಗಳಿಗೂ ಇದನ್ನೇ ಹೇಳುವುದು ಎಂದಿದ್ದಾರೆ. ಜಗತ್ತಿನಲ್ಲಿ ಉನ್ನತ ಸ್ಥಾನ ಪಡೆಯಬೇಕಾದರೆ, ಉದ್ಯೋಗಿಗಳು ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಸುಬ್ರಹ್ಮಣ್ಯನ್ ಪುನರುಚ್ಚರಿಸಿದ್ದಾರೆ.
ಎಸ್.ಎನ್.ಸುಬ್ರಮಣಿಯನ್ ಹೇಳಿಕೆಗೆ ಸಾಕಷ್ಟು ಪರ ವಿರೋಧ ಚರ್ಚೆ ಆಗಿದೆ. ಪರಕ್ಕಿಂತ ವಿರೋಧ ಅನಿಸಿಕೆಗಳೇ ಹೆಚ್ಚಾಗಿವೆ. ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶ ಇಲ್ಲದಿದ್ದರೆ ಅದೇನು ಚೆಂದ ಎಂದು ಹಲವು ಪ್ರತಿಕ್ರಿಯಿಸಿದ್ದಾರೆ. ಖ್ಯಾತ ಉದ್ಯಮಿ ಹರ್ಷ್ ಗೋಯಂಕಾ ಕೂಡ ಸುಬ್ರಮಣಿಯನ್ ವಾದವನ್ನು ವಿರೋಧಿಸಿದ್ದಾರೆ.
ಇದನ್ನೂ ಓದಿ : ಜಗದ್ಗುರು ಭಾರತೀತೀರ್ಥ ಶ್ರೀಗಳ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವ – ಜನವರಿ 11ರಂದು ಶೃಂಗೇರಿಯಲ್ಲಿ ಕಲ್ಯಾಣ ವೃಷ್ಟಿಸ್ತವ ಸಂಭ್ರಮ!