ಬೆಂಗಳೂರು : ಬಿಬಿಎಂಪಿ ಕೇಂದ್ರ ಕಚೇರಿ ಸೇರಿದಂತೆ 50 ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ಮಾಡಿದ್ದಾರೆ. ಖುದ್ದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್, ಉಪಲೋಕಾಯುಕ್ತ ನ್ಯಾ.ಕೆ.ಎನ್ ಫಣೀಂದ್ರ, ನ್ಯಾ. ಬಿ.ವೀರಪ್ಪ ಶುಕ್ರವಾರ ದಾಳಿ ನಡೆಸಿ ಅಧಿಕಾರಿಗಳ ಬೆವರಿಳಿಸಿದ್ದಾರೆ.
ಮುನಿರೆಡ್ಡಿ ಪಾಳ್ಯ, ಶಿವಾಜಿನಗರ, ವಸಂತನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಜಯನಗರ, ದಾಸರಹಳ್ಳಿ ಸೇರಿದಂತೆ ಹಲವೆಡೆ ರೇಡ್ ಮಾಡಿದ್ದಾರೆ. ಎಂಜಿನಿಯರ್, ಕಂದಾಯ ವಿಭಾಗದ ಕಚೇರಿಗಳ ಮೇಲೆ ದಾಳಿ ನಡೆಸಿದ್ದು, ದಾಳಿ ವೇಳೆ ಅಧಿಕಾರಿ ಸಿಬ್ಬಂದಿಯ ಲಂಚಗುಳಿತನ ಬಟಾಬಯಲಾಗಿದೆ. ಬಿಬಿಎಂಪಿ ಕಚೇರಿಗಳಲ್ಲಿ ಲಕ್ಷಾಂತರ ರೂಪಾಯಿ ಸೀಜ್ ಮಾಡಿದ್ದು, ಬಿಬಿಎಂಪಿ ಅಧಿಕಾರಿ, ಸಿಬ್ಬಂದಿಗಳ ವರ್ತನೆಗೆ ಲೋಕಾಯುಕ್ತ ಅಧಿಕಾರಿಗಳು ಹರಿಹಾಯ್ದಿದ್ದಾರೆ.
ಲಾಲ್ ಬಾಗ್ ರಸ್ತೆಯ ಬಿಬಿಎಂಪಿ ಕಚೇರಿಗೆ ಭೇಟಿ ನೀಡಿದಾಗ ಅಧಿಕಾರಿಗಳು ಕೆಲಸಕ್ಕೆ ಗೈರಾಗಿ ವೈಕುಂಠ ಏಕಾದಶಿಗೆ ತೆರಳಿದ್ದರು. ಈ ವೇಳೆ ಲೋಕಾಯುಕ್ತ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಬಿಎಂಪಿ ಆಡಳಿತ ವ್ಯವಸ್ಥೆಗೆ ಲೋಕಾಯುಕ್ತ ಬೆಚ್ಚಿಬಿದ್ದಿದ್ದು, ಪರಿಶೀಲನೆ ವೇಳೆ ದಾಖಲೆ ಇಲ್ಲದ ಲಕ್ಷಾಂತರ ರೂಪಾಯಿ ಪತ್ತೆಯಾಗಿದೆ. ಲೋಕಾಯುಕ್ತರನ್ನು ನೋಡುತ್ತಿದ್ದಂತೆ ತಬ್ಬಿಬ್ಬಾಗಿ ಹಣ ಅವಿತಿಡಲು ಯತ್ನಿಸಿದ್ದಾರೆ. ಅವರನ್ನು ತರಾಟೆಗೆ ತೆಗೆದುಕೊಂಡ ಅಧಿಕಾರಿಗಳು ಪರಿಶೀಲನೆ ನಡೆಸಿ ಹಣ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ರ‍್ಯಾಪರ್ ಚಂದನ್ ಶೆಟ್ಟಿ ಮೇಲೆ ಟ್ಯೂನ್ ಕದ್ದ ಆರೋಪ – ‘ಕಾಟನ್ ಕ್ಯಾಂಡಿ’ ಪಾರ್ಟಿ ಸಾಂಗ್ ಇನ್ ಟ್ರಬಲ್!