ಸಿನಿಮಾದ ಶೂಟಿಂಗ್ ವೇಳೆ ದುರ್ಘಟನೆ ಸಂಭವಿಸಿದ್ದು, 30 ಅಡಿ ಮೇಲಿಂದ ಬಿದ್ದು ಲೈಟ್ ಮ್ಯಾನ್ ನಿಧನರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಸೇರಿ ಚಿತ್ರತಂಡದ ಕೆಲವರ ವಿರುದ್ದ ಮಾದನಾಯಕನಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಸಿನಿಮಾದ ಶೂಟಿಂಗ್ ವೇಳೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ಇದ್ದಿದ್ದರಿಂದ ಚಿತ್ರದ ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ಈ. ಕೃಷ್ಣಪ್ಪ, ಮಾನೇಜರ್ ಸುರೇಶ್, ಅಸಿಸ್ಟೆಂಟ್ ಮ್ಯಾನೇಜರ್ ಮನೋಹರ್ ಮೇಲೆ ದೂರು ದಾಖಲಾಗಿದೆ.
ಕಳೆದ 15 ದಿನಗಳಿಂದ ಅಡಕಮಾರನಹಳ್ಳಿಯ ಗೋಡೌನ್ನಲ್ಲಿ ‘ಮನದ ಕಡಲು’ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಮಂಗಳವಾರ ಸಂಜೆ 5:30ರ ವೇಳೆಗೆ ಲೈಟ್ ಮ್ಯಾನ್ ಮೋಹನ್ ಕುಮಾರ್ 30 ಅಡಿ ಎತ್ತರದ ಅಲ್ಯುಮಿನಿಯಂ ರೊಸ್ಟ್ರಮ್ ಮೇಲೆ ಹತ್ತಿ ಲೈಟ್ ಬಿಚ್ಚುತ್ತಿದ್ದಾಗ ಅಲ್ಲಿಂದ ಕೆಳಗೆ ಬಿದ್ದಿದ್ದರು. ಮೋಹನ್ ಕುಮಾರ್ ಮೇಲಿಂದ ಕೆಳಕ್ಕೆ ಬಿದ್ದಾಗ ತಲೆಗೆ ಏಟಾಗಿ ತೀವ್ರ ರಕ್ತಸ್ರಾವ ಆಗಿತ್ತು. ಬಳಿಕ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಶೂಟಿಂಗ್ ಸೆಟ್ನಲ್ಲಿ ಕೆಲಸ ಮಾಡುತ್ತಿದ್ದ ಮೋಹನ್ ಕುಮಾರ್ಗೆ ಸುರಕ್ಷತಾ ಸಾಧನಗಳನ್ನು ಕೊಡದೇ ಕೆಲಸ ಮಾಡಿಸುತ್ತಿದ್ದರು ಎಂಬ ಆರೋಪ ಚಿತ್ರತಂಡದ ಮೇಲೆ ಕೇಳಿ ಬಂದಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ : ಬೆಂಗಳೂರು : ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಯುವತಿ ಜೊತೆ ಆಟೋ ಚಾಲಕನ ಗುಂಡಾವರ್ತನೆ – ವಿಡಿಯೋ ವೈರಲ್..!