ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ, ಭರತ್ ರಾಜ್ ನಿರ್ದೇಶನ ಹಾಗೂ ಪ್ರಮೋದ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ “ಲಾಫಿಂಗ್ ಬುದ್ಧ” ಚಿತ್ರಕ್ಕಾಗಿ ಕೆ.ಕಲ್ಯಾಣ್ ಬರೆದಿರುವ “ಎಂಥಾ ಚಂದಾನೇ” ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ವಿಷ್ಣು ವಿಜಯ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಹಾಡು ಬಿಡುಗಡೆ ಬಳಿಕ ಅಭಿಪ್ರಾಯ ಹಂಚಿಕೊಂಡ ರಿಷಭ್ ಶೆಟ್ಟಿ ಅವರು, ನನ್ನ ಅಭಿನಯದ “ಹೀರೋ” ಚಿತ್ರವನ್ನು ನಿರ್ದೇಶಿಸಿದ್ದ ಭರತ್ ರಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅವರು ಈ ಚಿತ್ರದ ಕಥೆ ಹೇಳಿದಾಗ ಮನಸ್ಸಿಗೆ ಹತ್ತಿರವಾಯಿತು. ಪ್ರಮೋದ್ ಶೆಟ್ಟಿ ಅವರನ್ನೇ ಈ ಚಿತ್ರದ ನಾಯಕನನ್ನಾಗಿ ನಾನು ಹಾಗೂ ನಿರ್ದೇಶಕರು ಆಯ್ಕೆ ಮಾಡಿದ್ದೆವು. ಈಗ ನನ್ನಿಷ್ಟದ ಸಾಹಿತಿಗಳಲ್ಲಿ ಒಬ್ಬರಾದ ಕಲ್ಯಾಣ್ ಅವರು ಬರೆದಿರುವ ಹಾಡು ಬಿಡುಗಡೆಯಾಗಿದೆ. ಆಗಸ್ಟ್ 15 ರಂದು ಟ್ರೇಲರ್ ಬಿಡುಗಡೆಯಾಗಲಿದೆ. ಆಗಸ್ಟ್ 30 ರಂದು ಚಿತ್ರ ತೆರೆಗೆ ಬರಲಿದೆ ಎಂದು ನಿರ್ಮಾಪಕ ತಿಳಿಸಿದರು.
ನಿರ್ದೇಶಕ ಭರತ್ ರಾಜ್ ಮಾತನಾಡಿ, ಪೊಲೀಸ್ ಅವರ ಕುಟುಂಬ ಹಾಗು ಅವರ ಭಾವನೆಗಳ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ. ಪ್ರಮೋದ್ ಶೆಟ್ಟಿ ಗೋವರ್ಧನ ಎಂಬ ಪೊಲೀಸ್ ಪೇದೆ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತೇಜು ಬೆಳವಾಡಿ ಸತ್ಯವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿಗಂತ್ ಮಂಚಾಲೆ ಅವರ ಪಾತ್ರ ಬಿಡುಗಡೆಯ ತನಕ ಗೌಪ್ಯವಾಗಿರುತ್ತದೆ. ಭದ್ರಾವತಿ ಹಾಗೂ ಸುತ್ತಮುತ್ತಲ್ಲಿನ ಸ್ಥಳದಲ್ಲೇ ಹೆಚ್ಚು ಚಿತ್ರೀಕರಣ ನಡೆದಿದೆ. ಕೆ.ಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ. ಚೀನಾ ದೇಶದಲ್ಲಿ ‘ಬುಡೈ’ ಎಂಬುವನ್ನು ಒಂದು ಚೀಲದಲ್ಲಿ ಮಕ್ಕಳಿಗೆ ಬೇಕಾದ ಸಿಹಿ ಪದಾರ್ಥಗಳನ್ನು ತುಂಬಿಕೊಂಡು, ಮಕ್ಕಳನ್ನು ಹಾಗೂ ಎಲ್ಲರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ. ನಮ್ಮ ಚಿತ್ರದ ನಾಯಕ ಗೋವರ್ಧನ ಪಾತ್ರವು ಸಹ ಇದೇ ರೀತಿ. ಹಾಗಾಗಿ “ಲಾಫಿಂಗ್ ಬುದ್ಧ” ಶೀರ್ಷಿಕೆ ಇಟ್ಟಿರುವುದಾಗಿ ತಿಳಿಸಿದರು.
ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಪ್ರಮೋದ್ ಶೆಟ್ಟಿ ಅವರು, ರಿಷಭ್ ಹಾಗೂ ಭರತ್ ರಾಜ್ ಈ ಚಿತ್ರದ ನಾಯಕ ನಾನೇ ಎಂದಾಗ ನನಗೆ ಆಶ್ಚರ್ಯವಾಯಿತು. ನಂತರ ಕಥೆ ಕೇಳಿ ಈ ಇಷ್ಟವಾಯಿತು. ಈ ಚಿತ್ರಕ್ಕಾಗಿ ನಾನು ತೂಕ ಹೆಚ್ಚಿಸಿಕೊಳ್ಳಬೇಕಾಯಿತು. ನಾನು ದಪ್ಪ ಆದ ತಕ್ಷಣ ಚಿತ್ರೀಕರಣ ಆರಂಭವಾಯಿತು. ಈ ಚಿತ್ರದ ನಂತರ ಇಪ್ಪತ್ಮೂರು ಕೆಜಿ ತೂಕ ಇಳಿಸಿಕೊಂಡಿದ್ದೇನೆ ಎಂದರು.
ರಿಷಭ್ ಶೆಟ್ಟಿ ಅವರು ಮಾಡಬೇಕಿದ್ದ ಪಾತ್ರವನ್ನು ನಾನು ಮಾಡಿದ್ದೇನೆ. ಆದರೆ ಪಾತ್ರದ ಬಗ್ಗೆ ಹೇಳುವ ಹಾಗಿಲ್ಲ ದಿಗಂತ್ ತಿಳಿಸಿದರು. ಸತ್ಯವತಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಾಯಕಿತೇಜು ಬೆಳವಾಡಿ ಹೇಳಿದರು. ನಿವೃತ್ತ ಪೊಲೀಸ್ ಅಧಿಕಾರಿ ಉಮೇಶ್ ಅವರು ಈ ಚಿತ್ರದಲ್ಲಿ ನಟಿಸಿದ್ದೇನೆ ಎಂದರು. ಹಾಡು ಬಿಡುಗಡೆ ವೇಳೆ ಚಿತ್ರದ ವಿತರಕರಾದ ಕೆ.ಆರ್.ಜಿ ಸ್ಟುಡಿಯೋಸ್ ನ ಕಾರ್ತಿಕ್ ಗೌಡ ಅವರು ಭಾಗಿಯಾಗಿದ್ದರು.
ಇದನ್ನೂ ಓದಿ : ಶೋಭಿತಾ ಜೊತೆ ನಾಗ ಚೈತನ್ಯ ನಿಶ್ಚಿತಾರ್ಥ: ಫೋಟೋ ಹಂಚಿಕೊಂಡು ಶುಭ ಹಾರೈಸಿದ ನಾಗಾರ್ಜುನ..!