ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಹೊರ ತಂದಿರುವ ಚಂದನವನದ ಚಿಲುಮೆಗಳು/Landmarks of Sandalwood ಪುಸ್ತಕ ಇಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಆಯಿತು. ಕನ್ನಡದಲ್ಲಿ ಡಾ.ಶರಣು ಹುಲ್ಲೂರು, ಇಂಗ್ಲಿಷ್ನಲ್ಲಿ ಎಸ್. ಶ್ಯಾಮ್ ಪ್ರಸಾದ್ ಬರೆದಿರುವ ಈ ದ್ವಿಭಾಷಾ ಪುಸ್ತಕವನ್ನು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಟಿ.ಎಸ್.ನಾಗಾಭರಣ, ನಟ ಶ್ರೀಮುರುಳಿ ಮತ್ತು ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ಬಿಡುಗಡೆ ಮಾಡಿದರು.
ಕನ್ನಡ ಚಲನಚಿತ್ರರಂಗ 90 ವರ್ಷ ತುಂಬಿರುವ ಈ ಸಂದರ್ಭದಲ್ಲಿ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯು ಈ ಅಪರೂಪದ ಕಾಫಿ ಟೇಬಲ್ ಪುಸ್ತಕವನ್ನು ಹೊರತಂದಿದ್ದು, ಕನ್ನಡ ಚಿತ್ರರಂಗಕ್ಕೆ ತಿರುವು ನೀಡಿದಂತಹ 90 ಚಿತ್ರಗಳ ವಿಶೇಷ ದಾಖಲೆ ಮತ್ತು ಅಪರೂಪದ ಫೋಟೋಗಳನ್ನು ಈ ಪುಸ್ತಕ ಒಳಗೊಂಡಿದೆ. ಕನ್ನಡ ಸಿನಿಮಾ ರಂಗದ ಕುರಿತು ದ್ವಿಭಾಷೆಯಲ್ಲಿ ಬಂದ ಕನ್ನಡದ ಮೊದಲ ಕಾಫಿ ಟೇಬಲ್ ಪುಸ್ತಕ ಇದಾಗಿದೆ.
ಪತ್ರಕರ್ತರು ಹಾಗೂ ಲೇಖಕರೂ ಆಗಿರುವ ಡಾ. ಶರಣು ಹುಲ್ಲೂರು ಮತ್ತು ಎಸ್. ಶ್ಯಾಮ್ ಪ್ರಸಾದ್ ಜೊತೆಯಾಗಿ ಆರೇಳು ತಿಂಗಳ ಕಾಲ ಈ ಪುಸ್ತಕ ಹೊರತರಲು ಶ್ರಮಿಸಿದ್ದನ್ನು ಹಂಸಲೇಖ ಮುಕ್ತ ಕಂಠದಿಂದ ಹೊಗಳಿದರು. ಇಂತಹ ದಾಖಲೆಗಳು ಹೆಚ್ಚಾಗಲಿ ಅಂತ ಹಾರೈಸಿದರು.
ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಪುಸ್ತಕ ರೂಪದಲ್ಲಿ ಸಿನಿಮಾ ಕುರಿತಾದ ವಿಷಯಗಳು ಕನ್ನಡದಲ್ಲಿ ವಿರಳ, ದಾಖಲೀಕರವೂ ಇಲ್ಲ. ಅದು ಕನ್ನಡದಲ್ಲಿ ಆಗಲಿ ಅಂತ ತಿಳಿಸಿದರು. ಟಿ.ಎಸ್. ನಾಗಾಭರಣ ಅವರು, ಸಿನಿಮಾ ಪಠ್ಯಗಳ ಜರೂರತ್ತು ಇಂದಿನ ದಿನವಿದೆ. ಅದು ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಮೂಲಕ ಆಗಿರುವುದು ಅಭಿನಂದನೆ ಸಲ್ಲಿಸಲೇಬೇಕಾದ ಕೆಲಸ. ಪುಸ್ತಕ ಎಲ್ಲರ ಮನೆಯಲ್ಲೂ ಇರಲಿ ಎಂದು ಹೇಳಿದರು.
ಇನ್ನು ಚಲನಚಿತ್ರ ಪತ್ರಕರ್ತರ ಮತ್ತು ಸಿನಿಮಾ ರಂಗದ ನಂಟಿನ ಕುರಿತಾಗಿ ಶ್ರೀಮುರುಳಿ ಮಾತನಾಡಿ, ಗಾನಯೋಗಿ ಪಂಚಾಕ್ಷರಿ ಗವಾಯಿ ಸಿನಿಮಾದ ಗೀತೆ ಹಾಡಿ ರಂಜಿಸಿದರು. ಡಾ.ರಾಜಕುಮಾರ ಕಿಡ್ನ್ಯಾಪ್ ಸೇರಿದಂತೆ ತಮ್ಮ ಬಾಲ್ಯದ ಸಿನಿಮಾ ಕುರಿತಾಗಿ ಆಯೇಷಾ ಖಾನಂ ಮಾತನಾಡಿದರು. ಪುಸ್ತಕ ಬಿಡುಗಡೆ ವೇಳೆ ಕನ್ನಡದ ಸಿನಿಮಾ ರಂಗದ ಅನೇಕ ನಟ ನಟಿಯರು, ತಂತ್ರಜ್ಞರು, ಪತ್ರಕರ್ತರು ಮತ್ತು ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ : ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ.. 3 ತಿಂಗಳ ಹಸುಗೂಸನ್ನೇ ಕೆರೆಗೆ ಎಸೆದ ಪಾಪಿ ತಾಯಿ..!