ಕರ್ನಾಟಕ ವೀಲ್‌ಚೇರ್ ಪ್ರೀಮಿಯರ್ ಲೀಗ್ ಸೀಸನ್ 3ರ ಟ್ರೋಫಿಯನ್ನು ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಶಾಸಕ ಡಾ. ಸಿ ಎನ್ ಅಶ್ವಥ್ ನಾರಾಯಣ ಅನಾವರಣಗೊಳಿಸಿದರು. ಇತ್ತೀಚಿಗಷ್ಟೇ ಬೆಂಗಳೂರಿನ ಗೋಕುಲಂ ಗ್ರಾಂಡ್, HMR ಲೇಔಟ್, ಗೋಕುಲ ಎಕ್ಸೆನ್ಷನ್, ಮತ್ತಿಕೆರೆಯಲ್ಲಿ ನಡೆದ ಈ ಗ್ರ್ಯಾಂಡ್ ಕಾರ್ಯಕ್ರಮದಲ್ಲಿ ಸಿ.ಎನ್. ಅಶ್ವಥ್ ನಾರಾಯಣ ಅವರ ಜೊತೆಗೆ ಖ್ಯಾತ ಸಿನಿಮಾ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ವಿಜಯ ರಾಘವೇಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ವರ್ಷದ ಕರ್ನಾಟಕ ವೀಲ್‌ಚೇರ್ ಪ್ರೀಮಿಯರ್ ಲೀಗ್ (ಕೆಡಬ್ಲ್ಯೂಪಿಎಲ್) ಹಿಂದಿನ ಎರಡು ಸೀಸನ್‌ಗಳಿಗಿಂತ ಗ್ರ್ಯಾಂಡ್ ಆಗಿರಲಿದೆ. ಈ ಸೀಸನ್‌ನಲ್ಲಿ ಸ್ಥಳೀಯ ಪ್ರತಿಭೆಗಳು ಮಾತ್ರವಲ್ಲದೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಆಟಗಾರರು ಭಾಗವಹಿಸಲಿದ್ದಾರೆ. ಇದು ಸ್ಪರ್ಧೆಯ ಜತೆಗೆ ನೋಡುಗರ ಉತ್ಸಾಹವನ್ನೂ ಹೆಚ್ಚಿಸಲಿದೆ ಎಂದು ಆಯೋಜಕರು ತಿಳಿಸಿದರು.
KWPL ಸೀಸನ್-3 ಟ್ರೋಫಿಯನ್ನು ಅನಾವರಣಗೊಳಿಸಿ ಮಾತನಾಡಿದ ಡಾ.ಸಿ.ಎನ್. ಅಶ್ವಥ್ ನಾರಾಯಣ, ‘ಅಡೆತಡೆಗಳನ್ನು ಮುರಿದು, ಚಾಂಪಿಯನ್‌ಗಳನ್ನು ನಿರ್ಮಿಸುವುದು’ ಎಂಬ ಅಡಿಬರಹದಲ್ಲಿ ಶ್ಲಾಘಿಸಿದರು. ಆಟಗಾರರಿಗೆ ಕ್ರೀಡೆಯಲ್ಲಿ ಮಾತ್ರವಲ್ಲದೆ ಅವರ ಜೀವನದಲ್ಲೂ ನಿಜವಾದ ಚಾಂಪಿಯನ್ ಆಗಲು ಈ ವೇದಿಕೆ ತುಂಬ ಮಹತ್ವದ್ದು ಎಂದರು. ವಿಜಯ ರಾಘವೇಂದ್ರ ಅವರು “ನಾನು ಇಂದು ಮಾತ್ರವಲ್ಲದೆ ಲೀಗ್ ಪಂದ್ಯಾವಳಿಯ ಸಮಯದಲ್ಲಿಯೂ ಇರುತ್ತೇನೆ. ಎಲ್ಲರ ಜತೆಗಿದ್ದು, ಟೂರ್ನಮೆಂಟ್ ಅನ್ನು ಯಶಸ್ವಿಗೊಳಿಸೋಣ ಎಂದರು.
ಕೆಡಬ್ಲ್ಯೂಪಿಎಲ್ ಸೀಸನ್-3 ಬಗ್ಗೆ ಮಾಹಿತಿ ಹಂಚಿಕೊಂಡ ದಿವ್ಯಾಂಗ್ ಮೈತ್ರಿ ಸ್ಪೋರ್ಟ್ಸ್ ಅಕಾಡೆಮಿ ಸಂಸ್ಥಾಪಕ ಸದಸ್ಯ ಶ್ರೀ ಶಿವ ಪ್ರಸಾದ್ ಅವರು, ಈ ವರ್ಷ ಕೆಡಬ್ಲ್ಯೂಪಿಎಲ್ ಸೀಸನ್-3ರ ಗುರಿಯು ಕ್ರೀಡಾ ಮನೋಭಾವದ ಜತೆಗೆ ಸಮುದಾಯ ನಿರ್ಮಾಣದ ಮನೋಭಾವವನ್ನು ಹುಟ್ಟುಹಾಕುವ ಕೆಲಸವಾಗಲಿದೆ. ಈ ಮೂಲಕ ಕ್ರೀಡೆಯಲ್ಲಿ ಜೀವನೋಪಾಯದ ದೃಷ್ಟಿಯನ್ನು ವೃದ್ಧಿಸಲು ವೀಲ್‌ಚೇರ್ ಕ್ರಿಕೆಟ್ ಅನ್ನು ಕ್ರಾಂತಿಯ ರೀತಿ ಸಿದ್ಧಪಡಿಸಬೇಕಿದೆ.
ಐಪಿಎಲ್‌ನಂತಹ ವೃತ್ತಿಪರ ಕ್ರಿಕೆಟ್ ಲೀಗ್‌ಗಳಂತೆ, ಕೆಡಬ್ಲ್ಯೂಪಿಎಲ್ ಸೀಸನ್ 3ರಲ್ಲಿಯೂ ಆಟಗಾರರ ಹರಾಜು ನಡೆಯಲಿದೆ. ತಂಡದ ಮಾಲೀಕರು ತಮ್ಮ ತಂಡಗಳನ್ನು ಕಾರ್ಯತಂತ್ರವಾಗಿ ನಿರ್ಮಿಸಲು ಅನುವು ಮಾಡಿಕೊಡುತ್ತದೆ. ಯಶಸ್ವಿ T20 ಸ್ವರೂಪವನ್ನು ಅಳವಡಿಸಿಕೊಂಡು ಕ್ರೀಡಾ ಪ್ರೇಮಿಗಳನ್ನು ಸೆಳೆಯಲಿದ್ದೇವೆ. KWPL ವೀಲ್‌ಚೇರ್ ಕ್ರಿಕೆಟ್ ಕ್ಷೇತ್ರದಲ್ಲಿ ಒಂದು ಹೆಗ್ಗುರುತಾಗಲಿದೆ ಎಂಬ ಭರವಸೆ ಇದೆ. ಇದು ಅಸಾಧಾರಣ ಪ್ರತಿಭೆ, ದೃಢತೆ ಮತ್ತು ವಿಕಲಾಂಗ ಅಥ್ಲೀಟ್‌ಗಳ ಉತ್ಸಾಹವನ್ನು ಎತ್ತಿ ತೋರಿಸುತ್ತದೆ. ಈ ಪಂದ್ಯಾವಳಿಯು ಅಂಗವಿಕಲರು (PWD) ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಕ್ರೀಡೆ ಮತ್ತು ಸಮಾಜದಲ್ಲಿ ಅವರ ಸೇರ್ಪಡೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದರು.
ಇದನ್ನೂ ಓದಿ : ದರ್ಶನ್ಗೆ ರಾಜಾತಿಥ್ಯ ನೀಡಿದ್ದಕ್ಕೆ 7 ಅಧಿಕಾರಿಗಳು ಸಸ್ಪೆಂಡ್..!