ಬೆಳಗಾವಿ : 1924 ಸ್ವಾತಂತ್ರ್ಯ ಸಂಗ್ರಾಮ ಚುರುಕು ಪಡೆದ ದಿನಗಳು. ಆ ದಿನಗಳಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಮಹಾ ಅಧಿವೇಶನ ನಡೆದಿತ್ತು. ಆ ಅಧಿವೇಶನ ನಡೆದು ನೂರು ವರ್ಷಗಳು ತುಂಬುತ್ತಿವೆ. ಹೀಗಾಗಿ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಶತಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಜ್ಜಾಗಿದ್ದು, ಬೆಳಗಾವಿ ಪೂರ್ತಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಇದರ ಜೊತೆಗೆ ಕಾಂಗ್ರೆಸ್ ಬಾವುಟ, ಫ್ಲೆಕ್ಸ್ಗಳು ನಗರದೆಲ್ಲೆಡೆ ಎಲ್ಲೆಡೆ ರಾರಾಜಿಸುತ್ತಿವೆ.
ಇಂದಿನಿಂದ ಎರಡು ದಿನ ‘ಗಾಂಧಿ ಭಾರತ’ ಕಾರ್ಯಕ್ರಮಕ್ಕೆ ಕುಂದಾನಗರಿ ಸಂಪೂರ್ಣವಾಗಿ ಸಿದ್ದಗೊಂಡಿದೆ. ಈಗಾಗಲೇ ಕಾಂಗ್ರೆಸ್ ನಾಯಕರ ದಂಡೇ ಕುಂದಾನಗರಿಯಲ್ಲಿ ಬೀಡು ಬಿಟ್ಟಿದೆ. ದೇಶದ ವಿವಿಧ ಮೂಲೆಗಳಿಂದ ಕಾಂಗ್ರೆಸ್ ನಾಯಕರು ಬೆಳಗಾವಿಗೆ ಆಗಮಿಸಿದ್ದಾರೆ.
ಇಂದು ಸಂಜೆ ಪೀರನವಾಡಿಯಲ್ಲಿರುವ ಗಾಂಧಿ ಭವನದಲ್ಲಿ ಎಐಸಿಸಿ ಕಾರ್ಯಕಾರಿಣಿ ಸಭೆ ನಡೆಯಲಿದೆ. ಸಭೆಯಲ್ಲಿ ಕಾಂಗ್ರೆಸ್ನ ಮುಂದಿನ ವರ್ಷದ ನೀಲಿನಕ್ಷೆ ಅನಾವರಣವಾಗಲಿದೆ. ಆರ್ಥಿಕ ಅಸಮಾನತೆ, ಪ್ರಜಾಪ್ರಭುತ್ವದ ಸವೆತ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಸಾಂವಿಧಾನಿಕ ಸಂಸ್ಥೆಗಳ ಮೇಲಿನ ದಾಳಿ ಸೇರಿ ಹಲವು ವಿಚಾರಗಳ ಮಂಥನ ನಡೆಯಲಿದೆ. ಖರ್ಗೆ ಅವರೇ ಎಲ್ಲರಿಗೂ ಡಿನ್ನರ್ ಪಾರ್ಟಿ ಆಯೋಜಿಸಿದ್ದು, ಸಂಜೆ ಸುವರ್ಣ ಸೌಧದಲ್ಲಿ ಗಾಂಧಿ ಪ್ರತಿಮೆ ಉದ್ಘಾಟನೆಯಾಗಲಿದೆ. ಈ ವೇಳೆ ಫೋಟೋ ಸೆಷನ್ ಕೂಡ ನಡೆಯಲಿದೆ.
ನಾಳೆ ನಡೆಯಲಿರುವ ಸಾರ್ವಜನಿಕ ಸಭೆಗೆ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಎಂದು ಹೆಸರಿಡಲಾಗಿದೆ ಎಂದು ಡಿಸಿಎಂ ಡಿಕೆಶಿ ಈಗಾಗಲೇ ಮಾಹಿತಿ ನೀಡಿದ್ದಾರೆ. ಐತಿಹಾಸಿಕ ಕಾರ್ಯಕ್ರಮಕ್ಕೆ ಕುಂದಾನಗರಿ ಬೆಳಗಾವಿ ಸರ್ವ ರೀತಿಯಲ್ಲೂ ಸಜ್ಜಾಗಿದ್ದು, ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಕಾರ್ಯಕ್ರಮದಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಗಾಂಧಿ ಭಾರತ ಕಾರ್ಯಕ್ರಮ ಹಿನ್ನೆಲೆ ಬೆಳಗಾವಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ : ಕೋಲಾರದಲ್ಲಿ ಹೃದಯವಿದ್ರಾವಕ ಘಟನೆ : ತನ್ನಿಬ್ಬರು ಮಕ್ಕಳನ್ನು ಕೊಂದು ತಾಯಿಯೂ ಆತ್ಮಹತ್ಯೆ..!