ಉಡುಪಿ : ಶ್ರೀಕೃಷ್ಣ ಜನ್ಮಾಷ್ಟಮಿಗೆ ಕೃಷ್ಣ ನಗರಿ ಉಡುಪಿ ಸಜ್ಜುಗೊಳ್ಳುತ್ತಿದೆ. ಆಗಸ್ಟ್ 26, ಅಂದರೆ ನಾಳೆ ನಡೆಯಲಿರುವ ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ಉಡುಪಿಯಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿದೆ. ವಿಶೇಷವಾಗಿ ಕೃಷ್ಣ ಮಠವನ್ನೊಳಗೊಂಡ ಅಷ್ಟಮಠಗಳಲ್ಲಿ ಸಕಲ-ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.
ಸೋಮವಾರ ರಾತ್ರಿ ಅರ್ಘ್ಯ ಪ್ರದಾನ, ಮರುದಿನ ವಿಟ್ಲಪಿಂಡಿ ಉತ್ಸವ ನಡೆಯಲಿದೆ. ಕೃಷ್ಣ ಮಠದಲ್ಲಿ ಭಕ್ತರಿಗಾಗಿ ವಿತರಿಸಲು ಸಾವಿರಾರು ಚಕ್ಕುಲಿ-ಉಂಡೆಪ್ರಸಾದ ತಯಾರಿಸಲಾಗುತ್ತಿದೆ. ಉಂಡೆ ಚಕ್ಕುಲಿ ಪ್ರಸಾದವನ್ನು ಕೃಷ್ಣನಿಗೆ ಅರ್ಪಿಸಿದ ಬಳಿಕ ಭಕ್ತರಿಗೆ ವಿತರಿಸಲಾಗುತ್ತದೆ.
ಈ ಬಾರಿ ಪರ್ಯಾಯ ಪುತ್ತಿಗೆ ಶ್ರೀಗಳು ಲಡ್ಡು ಪ್ರಿಯ ಕೃಷ್ಣನಿಗಾಗಿ 108 ಬಗೆಯ ಲಡ್ಡುಗಳನ್ನು ತಯಾರಿಸುತ್ತಿರುವುದು ವಿಶೇಷ. 108 ಬಗೆಯ ಉಂಡೆ ತಯಾರಿ ಇದೇ ಮೊದಲು. ಎಲ್ಲ ಬಗೆಯ ಹಣ್ಣು, ತರಕಾರಿ, ಡ್ರೈ ಫ್ರುಟ್ಸ್ ಮತ್ತು ಧಾನ್ಯಗಳಿಂದ ಬಗೆಬಗೆಯ ಲಡ್ಡು ಕೃಷ್ಣನಿಗೆ ಅರ್ಪಿಸಿದ ಬಳಿಕ ಭಕ್ತರಿಗೆ ಹಂಚಲಾಗುತ್ತದೆ.
ಈಗಾಗಲೇ ಕೃಷ್ಣನೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಗರಿಗೆದರಿದ್ದು, ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ಸಕಲ ಸಿದ್ಧತಾ ಕಾರ್ಯ ವಿಜೃಂಭಣೆಯಿಂದ ನಡೆಯುತ್ತಿದೆ.
ಆ.26ರಂದು ಜನ್ಮಾಷ್ಟಮಿ ಪ್ರಯುಕ್ತ ಮುದ್ದುಕೃಷ್ಣ ಸ್ಪರ್ಧೆಗಳು, ವಿವಿಧ ಧಾರ್ಮಿಕ ಕಾರ್ಯಕ್ರಮ, ವಿಶೇಷ ಪೂಜೆ ನೆರವೇರಲಿದ್ದು, ಉಡುಪಿ ರಥಬೀದಿಯಲ್ಲಿ ಆ. 27ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದೆ.
ಇದನ್ನೂ ಓದಿ : ಬೆಂಗಳೂರಿಗರನ್ನು ಬೆಚ್ಚಿಬೀಳಿಸಿದ ಬಾಲಕಿಯರ ಡಬಲ್ ಮರ್ಡರ್ – ಮಲತಂದೆಯಿಂದಲೇ ಹೆಣ್ಮಕ್ಕಳ ಬರ್ಬರ ಹತ್ಯೆ..!