ಬೆಂಗಳೂರು : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11ರ ನಿರೂಪಣೆ ಮಾಡುತ್ತಿರುವ ನಟ ಕಿಚ್ಚ ಸುದೀಪ್ ಅವರು ಇದೇ ನನ್ನ ಕೊನೆ ನಿರೂಪಣೆಯ ಸೀಸನ್ ಎಂದು ನಿನ್ನೆ ಘೋಷಣೆ ಮಾಡಿದ್ದಾರೆ.
ಇದರ ಬೆನ್ನಲ್ಲೇ ಸುದೀಪ್ ಅವರ ಈ ನಿರ್ಧಾರಕ್ಕೆ ಅನೇಕ ರೀತಿಯ ರೆಕ್ಕೆಪುಕ್ಕಗಳು ಬೆಳೆದುಕೊಂಡಿದ್ದವು. ಕಿಚ್ಚನ ಅಭಿಮಾನಿಗಳು ಕಲರ್ಸ್ ಕನ್ನಡ ವಾಹಿನಿಯಿಂದ ಸುದೀಪ್ ಅವರಿಗೆ ಅಗೌರವ ತೋರಲಾಗಿದೆ ಎಂದು ಚರ್ಚೆಗಳನ್ನು ಮಾಡಲಾರಂಭಿಸಿದ್ದರು. ಇದೀಗ ಅಂತಹ ಎಲ್ಲ ಪ್ರತಿಕ್ರಿಯೆಗಳಿಗೆ, ಅನಾವಶ್ಯಕ ಟೀಕೆಗಳಿಗೆ, ವಿಡಿಯೋ ಪೋಸ್ಟ್ಗಳಿಗೆ ಸುದೀಪ್ ಕೌಂಟರ್ ಕೊಟ್ಟಿದ್ದಾರೆ. ಮತ್ತೊಂದು ಟ್ವೀಟ್ ಮಾಡುವ ಮೂಲಕ ಈ ಎಲ್ಲಾ ವಿವಾದಗಳಿಗೆ ತೆರೆ ಎಳೆದಿದ್ದಾರೆ. ಇದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ನನ್ನ ನಿರ್ಧಾರ ನೇರ ಮತ್ತು ಪ್ರಾಮಾಣಿಕವಾಗಿದೆ ಎಂದು ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.
ಹೌದು.. ಈ ಕುರಿತು ಮತ್ತೊಂದು ಟ್ವೀಟ್ ಹಂಚಿಕೊಂಡಿರುವ ಕಿಚ್ಚ ಸುದೀಪ್ ಅವರು, “ನನ್ನ ಒಂದು ಟ್ವೀಟ್ಗೆ ನೀವು ಸ್ಪಂದಿಸಿರುವ ರೀತಿಗೆ ಹಾಗೂ ನಿಮ್ಮ ಪ್ರೀತಿ ಮತ್ತು ಬೆಂಬಲವನ್ನು ನಾನು ಮೆಚ್ಚುತ್ತೇನೆ. ಇದು ನನಗೆ ತುಂಬಾ ಸಂತಸವನ್ನುಂಟು ಮಾಡಿದೆ. ಆದರೆ ನನ್ನ ಹಾಗೂ ಚಾನೆಲ್ ನಡುವೆ ಏನೋ ಸಂಘರ್ಷವಾಗಿದೆ ಎಂದು ಹರಿದಾಡುತ್ತಿರುವ ವಿಡಿಯೋ ಹಾಗೂ ಪ್ರತಿಕ್ರಿಯೆಗಳನ್ನು ಸೃಷ್ಟಿಸುತ್ತಿರುವವರಿಗೆ ನಾನು ಕೇಳಿಕೊಳ್ಳುವುದು ಇಷ್ಟೆ. ನಾವು ಒಂದು ದೀರ್ಘವಾದ ಹಾಗೂ ಧನಾತ್ಮಕ ಪ್ರಯಾಣವೊಂದನ್ನು ಮಾಡಿದ್ದೇವೆ. ಇದರಲ್ಲಿ ಒಬ್ಬರಿಗೊಬ್ಬರು ಅಗೌರವದಿಂದ ನಡೆದುಕೊಳ್ಳುವ ಪ್ರಶ್ನೆಯೇ ಹುಟ್ಟುವುದಿಲ್ಲ. ಇದರ ಸುತ್ತ ಹುಟ್ಟುತ್ತಿರುವ ಊಹೆಗಳು ಸುಳ್ಳುಗಳಿಂದ ಕೂಡಿವೆ ಮತ್ತು ಮಾಹಿತಿ ಕೊರತೆಯಿಂದ ಕೂಡಿವೆ . ನನ್ನ ಒಂದು ಟ್ವೀಟ್ ಅತ್ಯಂತ ಪ್ರಾಮಾಣಿಕವಾಗಿದ್ದು. ನನ್ನ ಮತ್ತು ಕಲರ್ಸ್ ಕನ್ನಡದ ನಡುವಿನ ಸಂಬಂಧ ಒಂದು ಅದ್ಭುತವಾದದ್ದು. ಅವರು ನನ್ನನ್ನು ತುಂಬಾ ಗೌರವದಿಂದ ನಡೆಸಿಕೊಂಡಿಂದ್ದಾರೆ. ಡೈರೆಕ್ಟರ್ ಪ್ರಕಾಶ್ ಒಬ್ಬ ಅದ್ಭುತ ಪ್ರತಿಭೆ ಹೊಂದಿರುವ ವ್ಯಕ್ತಿ. ಅವರ ಬಗ್ಗೆ ನನಗೆ ತುಂಬಾ ಗೌರವವಿದೆ.
ನನ್ನೊಂದಿಗೆ ಕೆಲಸ ಮಾಡಿದವರು ಯಾವುದೋ ಅಪವಾದವನ್ನು ಎದುರಿಸುತ್ತಿರುವಾಗ ನಾನು ಹಿಂದೆ ಕುಳಿತುಕೊಂಡು ನೋಡುತ್ತಾ ಸಂಭ್ರಮಿಸುವವರ ಪಟ್ಟಿಗೆ ಸೇರಿದ ವ್ಯಕ್ತಿ ಅಲ್ಲ ಎಂದು ಸುದೀಪ್ ಹೇಳಿದ್ದಾರೆ “. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ಸುದೀಪ್ ತೆರೆ ಎಳೆದಿದ್ದಾರೆ.
ಇದನ್ನೂ ಓದಿ : ಕೋಟಿ-ಕೋಟಿ ವಂಚನೆ.. ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಸೇರಿ 8 ಜನ ಸೈಬರ್ ವಂಚಕರ ಬಂಧನ..!