ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಕಾರವಾಗಿ ಮಳೆ ಸುರಿಯುತ್ತಿದ್ದು, ಕನ್ನಂಬಾಡಿ ಅಣೆಕಟ್ಟೆಗೆ ಬಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ ಹಳೆ ಮೈಸೂರು ಭಾಗದ ಜನರ ಜೀವನಾಡಿ, ಕೆಆರ್‌ಎಸ್ ಜಲಾಶಯ ಬಹುತೇಕ ಭರ್ತಿಯಾಗಿದೆ. ಈ ಬಾರಿ ಮಳೆಯ ಆಶೀರ್ವಾದಿಂದ ಮುಂಗಾರು ಆರಂಭದಲ್ಲೇ ಕೆಆರ್‌ಎಸ್ ತುಂಬಿದ್ದು, ಭಾರಿ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ.
ಕೆಆರ್‌ಎಸ್ ಜಲಾಶಯ ಭರ್ತಿಯ ಹಂತ ತಲುಪಿರುವುದರಿಂದ ಭಾನುವಾರ ಬೆಳಗ್ಗೆಯಿಂದಲೇ ಅಣೆಕಟ್ಟೆಯಿಂದ 52,162 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾದಂತೆ ಹೊರಹರಿವಿನ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳಾಗಿದ್ದು, ಈಗಾಗಲೇ ಜಲಾಶಯದ ನೀರಿನ ಮಟ್ಟ 123.10 ಅಡಿಗೆ ತಲುಪಿದೆ. ಕೆಆರ್‌ಎಸ್ ಡ್ಯಾಂಗೆ 70,850 ಕ್ಯುಸೆಕ್ ನೀರು ಹರಿದುಬರುತ್ತಿದೆ. ಅಣೆಕಟ್ಟೆಯಲ್ಲಿ ನೀರಿನ ಒತ್ತಡವನ್ನು ಕಡಿಮೆ ಮಾಡಲು ಜಲಾಶಯದಿಂದ 52,162 ಕ್ಯೂಸೆಕ್ ನೀರು ನದಿಗೆ ಹರಿಬಿಡಲಾಗಿದೆ.
ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ಹರಿಯಬಿಟ್ಟಿರುವುದರಿಂದ ಕಾವೇರಿ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಸೃಷ್ಟಿಯಾಗಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮುನ್ಸೂಚನೆ ನೀಡಿದೆ. ಶ್ರೀರಂಗಪಟ್ಟಣ ಸೇರಿದಂತೆ ಚಾಮರಾಜನಗರದ ಹಲವು ಭಾಗಗಳಲ್ಲೂ ಪ್ರವಾಹ ಭೀತಿ ಸೃಷ್ಟಿಯಾಗಿದೆ.
ಇಂದಿನ ಕೆಆರ್‌ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿ.
ಇಂದಿನ ಮಟ್ಟ – 123.10 ಅಡಿ.
ಗರಿಷ್ಠ ಸಾಮರ್ಥ್ಯ – 49.452 ಟಿಎಂಸಿ.
ಇಂದಿನ ಸಾಮರ್ಥ್ಯ – 46.567 ಟಿಎಂಸಿ
ಒಳ ಹರಿವು – 70,850 ಕ್ಯೂಸೆಕ್
ಹೊರ ಹರಿವು – 52,162 ಕ್ಯೂಸೆಕ್ (ನದಿ, ನಾಲೆ, ಕುಡಿಯುವ ನೀರು ಸೇರಿ)
ಇದನ್ನೂ ಓದಿ : ಕನ್ನಡಿಗರ ಆಕ್ರೋಶಕ್ಕೆ ಮಣಿದು ಕ್ಷಮೆ ಕೇಳಿದ ಫೋನ್ ಪೇ CEO ಸಮೀರ್ ನಿಗಮ್..!