ಕನ್ನಡ ಸಾಹಿತ್ಯಕ್ಕೆ ದಾಸರ ಕೊಡುಗೆ ಅಪಾರ. ಅಂತಹ ಮಹನೀಯರ ಮಹಿಮೆಯನ್ನು ಚಿತ್ರಗಳ ಮೂಲಕ ಜನರಿಗೆ ಪರಿಚಯಿಸುವ ಕೆಲಸವನ್ನು ನಿರ್ದೇಶಕ ಮಧುಸೂದನ್ ಹವಾಲ್ದಾರ್ ಮಾಡುತ್ತಾ ಬರುತ್ತಿದ್ದಾರೆ. ಇದೀಗ ಕರ್ನಾಟಕದ ಮತ್ತೊಬ್ಬ ಶ್ರೇಷ್ಠ ಹರಿದಾಸರಾದ ಮಹಿಪತಿ ದಾಸರ ಕುರಿತಾದ “ಕಾಖಂಡಕಿ ಶ್ರೀ ಮಹಿಪತಿದಾಸರು” ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಮೊದಲ ಬಾರಿಗೆ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ.
ಈ ಸಿನಿಮಾದಲ್ಲಿ ಮಹಿಪತಿದಾಸರ ವಿರಚಿತ ಹನ್ನೊಂದು ಹಾಡುಗಳಿದ್ದು, ಚಿತ್ರದಲ್ಲಿ ಮಹಿಪತಿದಾಸರ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಜಯಾನಂದ ಅವರು ಏಳು ಹಾಡುಗಳನ್ನು ಹಾಗೂ ಮಧುಸೂದನ್ ಹವಾಲ್ದಾರ್, ಅನಂತ ಕುಲಕರ್ಣಿ, ರಾಯಚೂರು ಶೇಷಗಿರಿದಾಸ್ ಹಾಗೂ ವಿ.ವಿ. ಪ್ರಸನ್ನ ಅವರು ಒಂದೊಂದು ಗೀತೆಯನ್ನು ಹಾಡಿದ್ದಾರೆ.
ಇತ್ತೀಚೆಗೆ ಈ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಚಿತ್ರದ ಏಳು ಹಾಡುಗಳನ್ನು ಪ್ರದರ್ಶಿಸಲಾಯಿತು. ಮಾಧವತೀರ್ಥ( ತಂಬಿಹಳ್ಳಿ) ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ೧೦೦೮ ವಿದ್ಯಾಸಾಗರ ಮಾಧವತೀರ್ಥರು ಹಾಡುಗಳನ್ನು ಲೋಕಾರ್ಪಣೆ ಮಾಡಿದರು. ಮಾಜಿ ಶಾಸಕ ಎಸ್ ಕೆ ಬೆಳ್ಳುಬ್ಬಿ, ಹುಸೇನ್ ಸಾಬ್ ದಾಸ್, ಸುಭಾಷ್ ಕಾಖಂಡಕಿ, ಮುರಳಿ, ವಿಷ್ಣುತೀರ್ಥ ಜೋಶಿ, ರಾಘವೇಂದ್ರ ರಾವ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕನ್ನಡ ಹರಿದಾಸ ಸಾಹಿತ್ಯಕ್ಕೆ ಮಹಿಪತಿದಾಸರ ಕೊಡುಗೆ ಅಪಾರ. ಆದರೆ ಅವರಿಗೆ ಹೆಚ್ಚು ಪ್ರಚಾರ ಸಿಕ್ಕಿಲ್ಲ. ಸಿನಿಮಾ ಎಲ್ಲರನ್ನು ಬಹುಬೇಗ ತಲುಪುವ ಮಾಧ್ಯಮ. ಇದರ ಮೂಲಕ ಮಧುಸೂದನ್ ಹವಾಲ್ದಾರ್ ಅವರು ಕನ್ನಡದ ಹರಿದಾಸರನ್ನು ಜನರಿಗೆ ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಎಲ್ಲಾ ಹರಿದಾಸರ ಅನುಗ್ರಹವಿರಲಿ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ಶ್ರೀವಿದ್ಯಾಸಾಗರ ಮಾಧವತೀರ್ಥರು ಆಶೀರ್ವದಿಸಿದರು.
ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ಮಧುಸೂದನ್ ಹವಾಲ್ದಾರ್ ಅವರು, “ಶ್ರೀ ಜಗನ್ನಾಥದಾಸರು” ಚಿತ್ರದಿಂದ ಶ್ರೇಷ್ಠ ಹರಿದಾಸರ ಚಿತ್ರಗಳನ್ನು ನಿರ್ದೇಶಿಸುತ್ತಾ ಬಂದಿದ್ದೇನೆ. ಪ್ರಸ್ತುತ “ಕಾಖಂಡಕಿ ಶ್ರೀಮಹಿಪತಿದಾಸರು” ಚಿತ್ರವನ್ನು ನಿರ್ದೇಶಿಸುವುದರೊಂದಿಗೆ ಸಂಗೀತ ಸಂಯೋಜನೆ ಕೂಡ ಮಾಡಿದ್ದೇನೆ. ರಾಮಾಂಬುಜ ಮೂವೀಸ್ ಮೂಲಕ ಈ ಚಿತ್ರ ನಿರ್ಮಾಣವಾಗಿದೆ. ಸದ್ಯದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ನಟ ವಿಜಯಾನಂದ್ ಮಾತನಾಡಿ, ಐಟಿ ಉದ್ಯೋಗಿಯಾಗಿದ್ದ ನಾನು ದಾಸರ ಅನುಗ್ರಹದಿಂದ ಇಂದು ಮಹಿಪತಿದಾಸರ ಪಾತ್ರ ಮಾಡಿದ್ದೇನೆ. ನಟನೆ ಜೊತಗೆ ಗಾಯನವನ್ನೂ ಮಾಡಲು ಅವಕಾಶ ನೀಡಿದ ಮಧುಸೂದನ್ ಹವಾಲ್ದಾರ್ ಅವರಿಗೆ ಧನ್ಯವಾದ ಎಂದರು.
ಇದನ್ನೂ ಓದಿ : ಕಾಂಗ್ರೆಸ್ ನಾಯಕರ ವಿರುದ್ಧ DGPಗೆ ಬಿಜೆಪಿ ದೂರು..! –