ಬೆಂಗಳೂರು : ಭೋವಿ ನಿಗಮ ಕೇಸ್ನಲ್ಲಿ ಜೀವಾ ಆತ್ಮಹತ್ಯೆ ಪ್ರಕರಣವನ್ನು CCB ತನಿಖೆಗೆ ವರ್ಗಾವಣೆ ಮಾಡಿ ಕಮಿಷನರ್ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ. ಹೀಗಾಗಿ ವಕೀಲೆ ಜೀವ ಆತ್ಮಹತ್ಯೆ ತನಿಖೆ CCBಯಿಂದ ನಡೆಯಲಿದೆ.
ಇತ್ತೀಚಿಗೆ ಬೋವಿ ಅಭಿವೃದ್ದಿ ನಿಗಮಕ್ಕೆ ಸಂಬಂಧಿಸಿದಂತೆ ತನಿಖೆ ಎದುರಿಸಿದ್ದ 33 ವರ್ಷದ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಜೀವಾ ಬರೆದಿಟ್ಟಿರುವ 13 ಪುಟಗಳ ಡೆತ್‌ನೋಟ್ ಪತ್ತೆಯಾಗಿತ್ತು.
ಈ ಡೆತ್ನೋಟ್ನಲ್ಲಿ, ಭೋವಿ ಅಭಿವೃದ್ಧಿ ನಿಗಮದ ಅಕ್ರಮ ಪ್ರಕರಣದಲ್ಲಿ ಸಿಐಡಿ ತನಿಖಾಧಿಕಾರಿಗಳು ಹಲವು ಬಾರಿ ವಿಚಾರಣೆಗೆ ಕರೆಸಿ ಮಾನಸಿಕ ಕಿರುಕುಳ ನೀಡಿದ್ದಾರೆ. ತನಿಖಾಧಿಕಾರಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್‌ನೋಟ್ ಜೀವಾ ಉಲ್ಲೇಖಿಸಿದ್ದರು. ಡೆತ್‌ನೋಟ್ ಹಾಗೂ ಜೀವಾ ಸಹೋದರಿ ಸಂಗೀತಾ ನೀಡಿದ ದೂರಿನ ಅನ್ವಯ DySP ಕನಕಲಕ್ಷ್ಮಿ ವಿರುದ್ಧ ಬನಶಂಕರಿ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಅನ್ವಯ FIR ದಾಖಲಾಗಿತ್ತು.
ಇನ್ನು ಈ ಪ್ರಕರಣವನ್ನು ಸಿಬಿಐಗೆ ಕೊಡಲು ಬೆಂಗಳೂರು ವಕೀಲರ ಸಂಘ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ CCB ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು, ನಿನ್ನೆಯೇ ಪೊಲೀಸರು ಪ್ರಾಥಮಿಕ ತನಿಖೆಗೆ ದಾಖಲೆಗಳನ್ನು ಹಸ್ತಾಂತರ ಮಾಡಿದ್ದಾರೆ. ಇದೀಗ ಜೀವಾ ಆತ್ಮಹತ್ಯೆ ಪ್ರಕರಣವನ್ನು CCB ತನಿಖೆಗೆ ವರ್ಗಾವಣೆಯಾದ ಹಿನ್ನಲೆ DySP ಕನಕಲಕ್ಷ್ಮಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡುತ್ತಾ ಸಿಸಿಬಿ ಎಂಬುದನ್ನು ಕಾದುನೋಡಬೇಕಾಗಿದೆ.
ಇದನ್ನೂ ಓದಿ : ಕರಾವಳಿ, ಮಲೆನಾಡಿನಲ್ಲಿ ಮುಂದುವರೆದ ಕೂಂಬಿಂಗ್.. ಪರಾರಿಯಾಗಿರುವ ನಕ್ಸಲರಿಗಾಗಿ ತೀವ್ರ ಶೋಧ..!