ಸ್ಯಾಂಡಲ್ವುಡ್ಗೆ ಹೊಸ ನಾಯಕನಟರು ಎಂಟ್ರಿ ಕೊಟ್ಟು ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ. ಈಗಾಗಲೇ ‘ಜಮಾನ’ ಚಿತ್ರದ ಮೂಲಕ ನಾಯಕ ನಟನಾಗಿ ಗಮನ ಸೆಳೆದಿದ್ದ ಜಯಪ್ರಕಾಶ್ ಗೌಡ ಅವರು, ಇದೀಗ ‘ಭಗೀರಥ’ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ.
ಹೌದು, ಅಸಾಧ್ಯವಾದ್ದುದ್ದನ್ನು ಕಷ್ಟಪಟ್ಟು ಸಾಧ್ಯವಾಗಿಸಿದರೆ ಅದನ್ನು ” ಭಗೀರಥ ” ಪ್ರಯತ್ನ ಎನ್ನುತ್ತಾರೆ. ಇಂತಹ ಒಂದು ವಿಭಿನ್ನ ಕಥೆಯನ್ನಿಟ್ಟಿಕೊಂಡು ಬರುತ್ತಿರುವ “ಭಗೀರಥ” ಸಿನಿಮಾ ಟೀಸರ್ ಮೂಲಕ ಸದ್ದು ಮಾಡುತ್ತಿದೆ. ಈಗಾಗಲೇ ಹೊಸ ಕೇಜ್ ಕ್ರಿಯೇಟ್ ಮಾಡಿರುವ ಈ ಸಿನಿಮಾ ನವೆಂಬರ್ನಲ್ಲಿ ತೆರೆಗೆ ಬರಲು ತಯಾರಾಗಿದೆ.
ಭಗೀರಥ ಸಿನಿಮಾದ ನಾಯಕ ನಟ ಹಾಗೂ ಬಿಜೆಪಿ ಮುಖಂಡ ಜಯಪ್ರಕಾಶ್ ಗೌಡ (,ಜೆಪಿ) ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇವರ ಬರ್ತಡೇಯನ್ನು ಅಭಿಮಾನಿಗಳು ನಗರದಲ್ಲಿ ವಿವಿಧ ಸೇವಾ ಕಾರ್ಯಗಳ ಮೂಲಕ ಆಚರಿಸಿದರು. ನಗರದ ಅಕ್ಕಿ ಚೌಕದಲ್ಲಿರುವ ಗಣಪತಿ ದೇವಾಲಯದಲ್ಲಿ ಜಯಪ್ರಕಾಶ್ ಗೌಡ ಅಭಿಮಾನಿಗಳು, ಬೆಂಬಲಿಗರ ಜತೆ ವಿಶೇಷ ಪೂಜೆ ಸಲ್ಲಿಸಿದರು. ಅಭಿಮಾನಿಗಳು ಜೆಪಿ ಅವರಿಗೆ ಬೃಹತ್ ಹಾರಗಳನ್ನು ಹಾಕಿ ಅಭಿನಂದಿಸಿ,ಮುಂದಿನ ತಿಂಗಳು ಬಿಡುಗಡೆ ಆಗಲಿರುವ ಜೆಪಿ ನಾಯಕರಾಗಿ ಅಭಿನಯಿಸಿರುವ ಭಗೀರಥ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು.
ಅಷ್ಟೆ ಅಲ್ಲದೇ, ಜಯಪ್ರಕಾಶ್ ಗೌಡ ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು, ತಿಲಕ್ ನಗರದ ಕಿವುಡ ಮತ್ತು ಅಂಧ ಮಕ್ಕಳ ಶಾಲೆಗೆ ಭೇಟಿ ನೀಡಿ ಮಕ್ಕಳ ಕುಶಲೋಪರಿ ವಿಚಾರಿಸಿ, ಅವರಿಗೆ ಮಧ್ಯಾಹ್ನದ ಭೋಜನ ಬಡಿಸಿದರು. ಇದೇ ರೀತಿ ನಗರರದ ಹತ್ತು ಅಶ್ರಮಗಳಲ್ಲಿ ಸೇವಾ ಕಾರ್ಯದ ಮೂಲಕ ಅಭಿಮಾನ ಮೆರೆದರು.
ಇನ್ನು ಜಯಪ್ರಕಾಶ್ ಜೊತೆ ನಿಸರ್ಗ ಅಣ್ಣಪ್ಪ ಮತ್ತು ರೂಪಶ್ರೀ ಅಲ್ಲದೇ ಖಳನಟ ಶಶಿಧರ್, ಚಂದನ ರಾಘವೇಂದ್ರ, ಸುಧಾ ಬೆಳವಾಡಿ, ಶಿವರಾಜ್ ಕೆ.ಆರ್ ಪೇಟೆ, ರವಿಕಾಳೆ, ಶ್ರೀನಿವಾಸಪ್ರಭು, ಬಲ ರಾಜವಾಡಿ, ನಯನ, ಸುರಭಿ ರವಿ, ಶ್ರೀಯಾ ಪಾವನಿ, ಶಶಿಧರ್ ಸೇರಿದಂತೆ ಮುಂತಾದವರಿದ್ದಾರೆ.
ಸಾಯಿ ರಮೇಶ್ ಪ್ರೊಡಕ್ಷನ್ ಲಾಂಛನದಲ್ಲಿ ಕೆ.ರಮೇಶ್ ಮತ್ತು ಬಿ.ಭೈರಪ್ಪ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಪ್ರದೀಪ್ ವರ್ಮಾ ಅವರ ಸಂಗೀತ ನಿರ್ದೇಶನ ಹಾಗೂ ಸೂರಿ ಚಿತ್ತೂರು ಅವರ ಛಾಯಾಗ್ರಹಣವಿದ್ದು, ಡ್ಯಾನ್ಸ್ ಮಾಸ್ಟರ್ ನಾಗಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಚೇತನ್ ರಮೇಶ್ ಕೆಲಸ ಮಾಡಿದ್ದಾರೆ. ಟೈಟಲ್ನಿಂದ ಸದ್ದು ಮಾಡುತ್ತಿರುವ ‘ಭಗೀರಥ’ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಈ ನಿಟ್ಟಿನಲ್ಲಿ ಚಿತ್ರತಂಡ ಕೆಲಸ ಮಾಡುತ್ತಿದೆ.
ಇದನ್ನೂ ಓದಿ : ವಂಚನೆ ಆರೋಪ : ಗೋಪಾಲ್ ಜೋಶಿ ವಿರುದ್ದದ ಕೇಸ್ ತನಿಖೆಗೆ ತಡೆ ನೀಡಿದ ಹೈಕೋರ್ಟ್..!