ಕನ್ನಡ ಸಿನಿಮಾ ನಿರ್ದೇಶಕ ಮಠ ಖ್ಯಾತಿಯ ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ನಗರದ ಮಾದನಾಯಕನಹಳ್ಳಿ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗುರು ಅವರ ಮೃತದೇಹ ಪತ್ತೆಯಾಗಿದೆ. ನಿರ್ದೇಶಕ ಗುರುಪ್ರಸಾದ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಸ್ಯಾಂಡಲ್ವುಡ್ ಮಂದಿ ಶಾಕ್ ಆಗಿದ್ದಾರೆ. ಇನ್ನೂ, ಗುರು ಅವರ ಸಾವಿನ ಬಗ್ಗೆ ನಟ ಜಗ್ಗೇಶ್ ಕೂಡ ಪ್ರತಿಕ್ರಿಯೆ ನೀಡಿದ್ದರು. ಗುರುಪ್ರಸಾದ್ ಬಗ್ಗೆ ಜಗ್ಗೇಶ್ ಹಲವು ವಿಚಾರ ಹಂಚಿಕೊಂಡಿದ್ದರು.
ಇದೀಗ ಗುರುಪ್ರಸಾದ್ ಸಾವಿನ ನಂತರ ಜಗ್ಗೇಶ್ ಹೇಳಿದ ಮಾತುಗಳನ್ನು ಬಿಗ್ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಅವರು ತೀವ್ರವಾಗಿ ಖಂಡಿಸಿದ್ದಾರೆ. ಗುರುಪ್ರಸಾದ್ ನಿಧನದ ಬಳಿಕ ಜಗ್ಗೇಶ್ ಅವರು ಕೆಳಮಟ್ಟದಲ್ಲಿ ಟೀಕೆ ಮಾಡಿದ್ದು ಸರಿಯಲ್ಲ, ಸತ್ತ ವ್ಯಕ್ತಿಯ ಬಗ್ಗೆ ಅವರ ಸಾವಿನಲ್ಲಿ ವಿಕೃತಿ ಕಾಣಬಹುದು ಎಂಬುದನ್ನು ನಿನ್ನಿಂದ ಕಲಿಯಬೇಕು ಎಂದು ಏಕವಚನದಲ್ಲಿಯೇ ಜಗ್ಗೇಶ್ ಅವರನ್ನು ಜಗದೀಶ್ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಜಗದೀಶ್ ಅವರು ವಿಡಿಯೋ ಹರಿಬಿಟ್ಟಿದ್ದು, ಎಲ್ಲೆಡೆ ಅದು ಸಖತ್ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಜಗ್ಗೇಶ್ vs ಜಗದೀಶ್ ಎಂದು ಮಾತನಾಡುತ್ತಿದ್ದಾರೆ.
ಜಗದೀಶ್ ಹೇಳಿದ್ದೇನು? ‘ವಾವ್ ಜಗ್ಗೇಶ್.. ಸತ್ತ ವ್ಯಕ್ತಿ ಬಗ್ಗೆ ಎಂತಹಾ ವಿಶ್ಲೇಷಕ ಕೃತಿಯನ್ನು ಕೊಟ್ಟೆ. ಸಾವಿನಲ್ಲೂ ವಿಕೃತಿ ಕಾಣಬಹುದಾಗಿದೆ ಎಂಬುದನ್ನು ನಿನ್ನಿಂದ ಕಲಿಯಬೇಕಾಗಿದೆ. ಸಂಸ್ಕೃತಿಯೇ ಅದೇ ರೀತಿ ಇದೆಯೋ ಅಥವಾ ನಿನ್ನ ಮನಸ್ಥಿತಿಯೇ ಅಷ್ಟು ವಿಕೃತವಾಗಿದೆಯೋ ನನಗೆ ಗೊತ್ತಿಲ್ಲ. ಗುರುಪ್ರಸಾದ್ಗೆ ಕೆರೆತ ಇತ್ತಾ? ಕೀವು, ರಕ್ತ ಬರುತ್ತಿತ್ತಾ? ಎಂಥಾ ಮನುಷ್ಯ ನೀನು? ಯಾವ ರೀತಿಯಲ್ಲಿ ಮನುಷ್ಯ ಎನ್ನಬೇಕೋ ತಿಳಿಯುತ್ತಿಲ್ಲ’ ಎಂದು ಜಗದೀಶ್ ಹೇಳಿದ್ದಾರೆ.
‘ನಿನ್ನನ್ನು ನೀನು ರಾಘವೇಂದ್ರರ ಭಕ್ತ ಅಂತ ಹೇಳ್ತೀಯ. ರಾಘವೇಂದ್ರನ ಭಕ್ತನಾಗಿ, ನಿನಗೆ ಲೈಫ್ ಕೊಟ್ಟ ಡೈರೆಕ್ಟರ್ ಬಗ್ಗೆ ಈ ರೀತಿ ಮಾತಾಡ್ತೀಯ. ‘ಮಠ’ ಸಿನಿಮಾದಲ್ಲಿ ಗುರುಪ್ರಸಾದ್ ನಿನಗೆ ಲೈಫ್ ಕೊಟ್ಟ. ಜಗ್ಗೇಶ್ ಯಾರು ಅಂತ ಇಡೀ ಕರ್ನಾಟಕ ಮರೆತುಹೋಗಿತ್ತು. ಸಾವಿನಲ್ಲೂ ವಿಕೃತಿ ಕಾಣುವಂತಹ ವ್ಯಕ್ತಿ ನೀನು ಎಂಬುದು ನನಗೆ ಗೊತ್ತಿರಲಿಲ್ಲ. ಗುರುಪ್ರಸಾದ್ ಬಗ್ಗೆ ನೀನು ಆಡಿದ ಮಾತು ನನಗಂತೂ ಜೀರ್ಣ ಆಗಿಲ್ಲ. ಕಾಲಾಯ ತಸ್ಮೈ ನಮಃ. ಇಂದು ಗುರುಪ್ರಸಾದ್ ಮನೆಯ ಬಾಗಿಲಲ್ಲಿ ಇದ್ದ ಯಮ ನಾಳೆ ಯಾರ ಮನೆಗೆ ಬೇಕಾದರೂ ಬರಬಹುದು. ಕಾದು ನೋಡೋಣ’ ಎಂದು ಜಗದೀಶ್ ಹೇಳಿದ್ದಾರೆ.
ಇದನ್ನೂ ಓದಿ : ಯಾವ ರಣನೂ ಇಲ್ಲ.. ರಂಗನೂ ಇಲ್ಲ.. ಮತದಾರರ ಹೃದಯ ಗೆಲ್ಲಬೇಕು ಅಷ್ಟೆ – ಡಿಸಿಎಂ ಡಿಕೆಶಿ..!