ಚಂದ್ರಯಾನ 3 ಸೇರಿದಂತೆ ಹಲವು ಮಹತ್ವದ ಮೈಲಿಗಲ್ಲು ನಿರ್ಮಿಸಿರುವ ಇಸ್ರೋ ಇದೀಗ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಬಾಹ್ಯಾಕಾಶದಲ್ಲಿ ನೌಕೆಗಳ ಡಾಕಿಂಗ್ ಮಾಡುವ ಪ್ರಯೋಗದಲ್ಲಿ ಆರಂಭಿಕ ಯಶಸ್ಸು ಕಂಡಿದೆ. ಇಸ್ರೋ SpaDeX ಉಡಾವಣೆ ಯಶಸ್ವಿಯಾಗಿದೆ.
ಜಗತ್ತಿನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳ ಪೈಕಿ ಭಾರತದ ಇಸ್ರೋ ತನ್ನದೇಯಾದ ಹೆಗ್ಗುರುತು ಹೊಂದಿದೆ. ಅತೀ ಕಡಿಮೆ ಖರ್ಚಿನಲ್ಲಿ ಚಂದ್ರಯಾನ3 ಸೇರಿದಂತೆ ಹಲವು ಯಶಸ್ವಿ ಯೋಜನೆಗಳನ್ನು ಇಸ್ರೋ ಸಾಧಿಸಿದೆ. ಇದೀಗ ಇಸ್ರೋ ಮುಡಿಗೆ ಮತ್ತೊಂದು ಗರಿ ಸೇರಿಕೊಂಡಿದೆ. ಬಾಹ್ಯಾಕಾಶದಲ್ಲಿ ಎರಡು ಉಪಗ್ರಹಗಳನ್ನು ಜೋಡಿಸುವ ಡಾಕಿಂಗ್ ಎಂಬ ಸಾಹಸದ ಮೊದಲ ಹೆಜ್ಜೆಯನ್ನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಯಶಸ್ವಿಯಾಗಿ ಮುಂದಡಿ ಇಟ್ಟಿದೆ.
ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್ ಯೋಜನೆ ಭಾಗವಾಗಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ PSLV-ಸಿ60 ರಾಕೆಟ್ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಡಾಕಿಂಗ್ ನಡೆಸುವ ಎರಡು ಉಪಗ್ರಹಗಳನ್ನ ಪಿಎಸ್ಎಲ್ವಿ-ಸಿ60 ನೌಕೆಯು ನಿನ್ನೆ ರಾತ್ರಿ ಕಕ್ಷೆಗೆ ಸೇರಿಸಲಾಯ್ತು. ಈ ಉಪಗ್ರಹಗಳು ಈಗಾಗ್ಲೆ ನಿಗದಿತ ಕಕ್ಷೆಗೆ ಸೇರಿವೆ. ಜನವರಿ ತಿಂಗಳಲ್ಲೇ ಅಂದರೆ ಇನ್ನು ಕೆಲವೇ ದಿನಗಳಲ್ಲಿ ಸ್ಪೇಸ್ ಡಾಕಿಂಗ್ ಪ್ರಕ್ರಿಯೆ ಆರಂಭಗೊಳ್ಳಲಿದ್ದು, 2ವರ್ಷಗಳ ಕಾಲ ಬಾಹ್ಯಾಕಾಶದಲ್ಲಿ ಅಧ್ಯಯನ ಮಾಡಲಿದೆ. ಎರಡು ಉಪಗ್ರಹಗಳನ್ನು ಜೋಡಿಸುವ ಹಾಗೂ ಬೇರ್ಪಡಿಸುವ ಪ್ರಯೋಗದಲ್ಲಿ ಈವರೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ಯಶಸ್ಸು ಕಂಡಿದೆ. ಈ ಪ್ರಯೋಗ ಏನಾದ್ರು ಯಶಸ್ವಿ ಆದರೆ ಸ್ಪೇಡೆಕ್ಸ್‌ನಲ್ಲಿ ಯಶಸ್ವಿಯಾದ ವಿಶ್ವದ 4ನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.
ಇದನ್ನೂ ಓದಿ : ಹೊಸ ವರ್ಷ ಸ್ವಾಗತಕ್ಕೆ ಸಜ್ಜಾದ ಸಿಲಿಕಾನ್ ಸಿಟಿ – ಪೊಲೀಸ್ ಇಲಾಖೆಯ ತಯಾರಿ ಹೇಗಿದೆ? ಏನೆಲ್ಲಾ ರೂಲ್ಸ್?