ಬೆಂಗಳೂರು : ಪಂಚಿ ಮತ್ತು ಅಂಬಾಲಿ ಭಾರತಿ ನಾಯಕ-ನಾಯಕಿಯಾಗಿ ನಟಿಸಿರುವ ‘ನಾ ನಿನ್ನ ಬಿಡಲಾರೆ’ ಚಿತ್ರವು ಶುಕ್ರವಾರ (ನ.29) ಬಿಡುಗಡೆಯಾಗಿದ್ದು, ರಾಜ್ಯಾದ್ಯಂತ ಅದ್ಭುತ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ, ಚಿತ್ರಕ್ಕೆ ಮಲ್ಟಿಪ್ಲೆಕ್ಸ್‌ಗಳಿಂದ ದೊಡ್ಡ ಮಟ್ಟದಲ್ಲಿ ಅನ್ಯಾಯ ಆಗುತ್ತಿದೆ ಎಂದು ನಾಯಕಿ, ನಿರ್ಮಾಪಕಿ ಅಂಬಾಲಿ ಭಾರತಿ ಸಿಡಿದೆದ್ದಿದ್ದಾರೆ.
ಶನಿವಾರ ಚಿತ್ರತಂಡದವರು ಮೈಸೂರು ಮತ್ತು ಬೆಂಗಳೂರಿನ ಕೆಲವು ಮಲ್ಟಿಪ್ಲೆಕ್ಸ್‌ಗಳಿಗೆ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ಚಿತ್ರದ ಪ್ರಚಾರಕ್ಕೆಂದು ಕಳಿಸಿಕೊಟ್ಟ ಸ್ಟ್ಯಾಂಡಿಗಳ ಪತ್ತೆಯೇ ಇಲ್ಲ. ಮುಂದಿನ ವಾರ ಬಿಡುಗಡೆಯಾಗುತ್ತಿರುವ ತೆಲುಗು ಚಿತ್ರ ‘ಪುಷ್ಪ 2’ನ ಸ್ಟ್ಯಾಂಡಿಗಳನ್ನು ಮುಂದಿಟ್ಟು ಪ್ರಚಾರಕ್ಕೆ ಅನುವು ಮಾಡಿಕೊಟ್ಟರೆ, ಕನ್ನಡ ಚಿತ್ರಗಳ ಪ್ರಚಾರವೇ ಆಗುತ್ತಿಲ್ಲ. ಇದರಿಂದ ಚಿತ್ರದ ಬಗ್ಗೆ ಮಾಹಿತಿ ಇಲ್ಲದವರು, ಬೇರೆ ಚಿತ್ರಗಳಿಗೆ ಟಿಕೆಟ್ ಖರೀದಿಸಿ ನೋಡಿದ್ದಾರಂತೆ. ಹಾಗಾಗಿ ಕನ್ನಡ ಚಿತ್ರಗಳಿಗೆ ದೊಡ್ಡ ಅನ್ಯಾಯವಾಗುತ್ತಿದೆ ಎಂದು ಅಂಬಾಲಿ ಭಾರತಿ ಮಲ್ಟಿಪ್ಲೆಕ್ಸ್‌ಗಳ ವಿರುದ್ದ ಗುಡುಗಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕನ್ನಡ ಪ್ರೇಕ್ಷಕರು ಟಿಕೆಟ್ ತೆಗೆಕೊಂಡರು ಶೋ ಇಲ್ಲ. ಮೈಸೂರಿನಲ್ಲಿ ಮಲ್ಟಿಪ್ಲೆಕ್ಸ್‌ನಲ್ಲಿ ಇದೇ ಆಗಿದೆ. ಬೆಂಗಳೂರಿನ ಒರಾಯಾನ್ ಮಾಲ್ನಲ್ಲೂ ಇದೇ ಕಥೆ ಆಗಿದೆ ಎಂದು ನಿರ್ಮಾಪಕಿ ಅಂಬಾಲಿ ಭಾರತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಸಿನಿಮಾ ಪೋಸ್ಟರ್ಗಳನ್ನು ಕೂಡ ಎಲ್ಲಿಯೂ ಹಾಕುತ್ತಿಲ್ಲ. ಸ್ಟ್ಯಾಂಡಿಗಳನ್ನು ಕಿತ್ತು ಹಾಕುತ್ತಿದ್ದಾರೆ. ಹೀಗಾದ್ರೆ ಹೊಸ ಸಿನಿಮಾ ತಂಡ ಬೆಳೆಯುವುದು ಹೇಗೆ? ಎರಡು ವರ್ಷ ಬೇಕಾಯ್ತು ಸಿನಿಮಾ ಮಾಡೋದಕ್ಕೆ. ಆ ಶ್ರಮ ನಮಗೆ ಮಾತ್ರ ಗೊತ್ತು. ಜನರಿಗೆ ಸಿನಿಮಾನ ತಲುಪಿಸೋದು ಒಂದು ಟಾಸ್ಕ್. ಆದರೆ ಈ ರೀತಿ ಮಲ್ಟಿಪ್ಲೆಕ್ಸ್‌ನಲ್ಲಿ ಅನ್ಯಾಯ ಆಗ್ತಿದೆ ಎಂದು ಬೇಸರ ಹೊರ ಹಾಕಿದ್ದಾರೆ.
ಜನ ನಮ್ಮ ಸಿನಿಮಾಗೆ ಬರ್ತಿದ್ದಾರೆ. ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ತಿದೆ. ಆದ್ರೆ ಮಲ್ಟಿಪ್ಲೆಕ್ಸ್ಗಳು ಎಲ್ಲ ನಮ್ಮ ಸಿನಿಮಾ ಪೋಸ್ಟರ್ಸ್ ಅನ್ನು ತೆಗೆದು ಹಾಕ್ತಿವೆ. ನಮ್ಮ ನೆಲದಲ್ಲೇ ನಮಗೆ ಅನ್ಯಾಯವಾಗುತ್ತಿದ್ದು, ಕೇಳೋರು ಯಾರೂ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕನ್ನಡ ಚಿತ್ರಕ್ಕೆ ಮಾಲ್‍ನಲ್ಲಿ ಒಂದು ಅಂಗುಲದ ಜಾಗ ಎಂದರೆ ಹೇಗೆ? ಎಂದು ಅಂಬಾಲಿ ಭಾರತಿ ಪ್ರಶ್ನಿಸಿದ್ದಾರೆ. ಯಾವಾಗ ಭಾರತಿ ಅಂಬಾಲಿ ಮತ್ತು ‘ನಾ ನಿನ್ನ ಬಿಡಲಾರೆ’ ಚಿತ್ರತಂಡದವರು ಹೋಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರತಿಭಟನೆ ನಡೆಸಿದರೋ, ಆಗ ಮಲ್ಟಿಫ್ಲೆಕ್ಸ್‌ನವರು ತಪ್ಪೊಪ್ಪಿಕೊಂಡಿದ್ದಾರೆ. ಕ್ಷಮೆ ಕೇಳಿ ಒಳಗಿಟ್ಟಿದ್ದ ಸ್ಟ್ಯಾಂಡಿಗಳನ್ನು ತಂದು ಮತ್ತೆ ಮುಂದೆ ಪ್ರದರ್ಶನಕ್ಕೆ ಇಟ್ಟಿದ್ದಾರೆ.
‘ನಾ ನಿನ್ನ ಬಿಡಲಾರೆ’ ಒಂದು ಹಾರರ್ ಚಿತ್ರವಾಗಿದ್ದು, ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನವೀನ್ ನಿರ್ದೇಶನ ಮಾಡಿದ್ದಾರೆ. ಕಮಲ ಉಮಾ ಭಾರತಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ, ಅಂಬಾಲಿ ಭಾರತಿ ನಾಯಕಿಯಾಗಿ ನಟಿಸುವ ಜತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ಚಿತ್ರದಲ್ಲಿ ಭಾರತಿ ಅಂಬಾಲಿ ಮತ್ತು ಪಂಚಾಕ್ಷರಿ ಜೊತೆಗೆ ‘ಸಿದ್ಲಿಂಗು’ ಶ್ರೀಧರ್, ಮಹಾಂತೇಶ್, ಸೀರುಂಡೆ ರಘು ಮುಂತಾದವರು ನಟಿಸಿದ್ದಾರೆ. ಎಂ.ಎಸ್. ತ್ಯಾಗರಾಜ್ ಸಂಗೀತ ಈ ಚಿತ್ರಕ್ಕಿದೆ. ಬಹುತೇಕ ಹೊಸಬರೇ ಕೂಡಿ ಹಳೇ ತಂತ್ರಜ್ಞರ ಜೊತೆಗೆ ಮಾಡಿರೋ ಈ ಸಿನಿಮಾ ನ. 29ರಂದು ರಾಜ್ಯಾದ್ಯಂತ ಬಿಡುಗಡೆ ಆಗಿತ್ತು.
ಇದನ್ನೂ ಓದಿ : ಕೊಡಗು : ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ.. ಓರ್ವ ಸಾವು, ನಾಲ್ವರಿಗೆ ಗಂಭೀರ ಗಾಯ..!