ಬೆಳಗಾವಿ : ಕುಂದಾ ನಗರಿ ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಸಾರ್ವಜನಿಕವಾಗಿ ಮಹಿಳೆಯ ಬಟ್ಟೆ ಹರಿದು ಹಾಕಿ ಹಲ್ಲೆ ಮಾಡಿದ ಘಟನೆ ನಗರದ ವಡ್ಡರವಾಡಿಯಲ್ಲಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಮನೆಗೆ ನುಗ್ಗಿ ತಾಯಿ, ಮಗಳ ಮೇಲೆ ಮನೆಯ ಪಕ್ಕದ ಅಷ್ಟೇಕರ್ ಕುಟುಂಬವೇ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಹಲ್ಲೆಗೊಳಗಾದ ತಾಯಿ ಮತ್ತು ಮಗಳು ಎರಡು ದಿನ ಮಾಳಮಾರುತಿ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಆದರೆ, ಠಾಣೆಯಲ್ಲಿ ದೂರು ಸ್ವೀಕರಿಸದ ಕಾರಣ ತಾಯಿ-ಮಗಳು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಇದೀಗ ನಗರ ಪೊಲೀಸ್ ಆಯುಕ್ತರ ಸೂಚನೆಯ ಮೇರೆಗೆ ಬಿಎನ್‌ಎಸ್ 115(2), 3(5), 331, 352, 74 ಸೆಕ್ಷನ್ ಅಡಿ ಮೂವರ ವಿರುದ್ದ ಕೇಸ್ ದಾಖಲಾಗಿದೆ.
ತಾಯಿ-ಮಗಳು ನೀಡಿದ ದೂರಿನಲ್ಲಿ ಏನಿದೆ? ಸಂಬಂಧ ಇಲ್ಲದವರು ಮನೆಗೆ ಬಂದು ಹೋಗುತ್ತಿದ್ದಾರೆ ಎಂದು ಆರೋಪಿಸಿ ನಮ್ಮ ಮೇಲೆ ಅಮಾನವೀಯವಾಗಿ ವರ್ತಿಸಿ ಹಲ್ಲೆ ಮಾಡಿದ್ದಾರೆ. ನಾವು ಇರುವ ಮನೆಯನ್ನು ತೊರೆಯುವಂತೆ ಮಾಡಲು ಸುಖಾಸುಮ್ಮನೆ ಜಗಳ ತೆಗೆದು ಹಲ್ಲೆ ಮಾಡುತ್ತಿದ್ದಾರೆ. ಹೀಗಾಗಿ ನಮಗೆ ಜೀವ ಭಯ ಇದೆ ರಕ್ಷಣೆ ನೀಡಿ ಎಂದು ತಾಯಿ ಮತ್ತು ಮಗಳು ಪೊಲೀಸರಲ್ಲಿ ಮನವಿ ಮಾಡಿ ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ : ಹೇಗಿತ್ತು ಗೊತ್ತಾ ಮುನಿ ಗ್ಯಾಂಗ್ ಏಡ್ಸ್ ಇಂಜೆಕ್ಷನ್ ಪ್ಲಾನ್! ಆರ್.ಅಶೋಕ್ ಜಸ್ಟ್ ಮಿಸ್ ಆಗಿದ್ದೇಗೆ?