ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ರಾಜ್ಯದಲ್ಲಿ ಇನ್ನು 2-3 ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅದರಲ್ಲೂ ಬೆಂಗಳೂರಿನ ಸುತ್ತ ಮುತ್ತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇತ್ತ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದಿನಿಂದ (ಅ.16) ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಟೆಸ್ಟ್ ಸರಣಿ ಶುರುವಾಗಬೇಕಿದೆ. ಇದೀಗ ಬೆಂಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಟೆಸ್ಟ್ ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ. ಏಕೆಂದರೆ ಮುಂದಿನ 2-3 ದಿನಗಳ ಕಾಲ ಬೆಂಗಳೂರಿನಲ್ಲಿ ಯೆಲ್ಲೋ ಆಲರ್ಟ್ ಘೋಷಿಸಲಾಗಿದ್ದು, ಹೀಗಾಗಿ ಪಂದ್ಯವನ್ನು ಆಯೋಜಿಸುವುದು ಕಷ್ಟಸಾಧ್ಯ.
ಕಳೆದ ಮೂರು ದಿನಗಳಿಂದ ಮುಂಜಾನೆಯಿಂದಲೇ ಬಿಡುವು ನೀಡದೆ ವರುಣ ಅಬ್ಬರಿಸುತ್ತಿದ್ದಾನೆ. ಅಲ್ಲದೆ, ಮುಂದಿನ ಮೂರು ದಿನಗಳಲ್ಲೂ ಇಂತಹದ್ದೇ ವಾತಾವರಣ ಇರುವ ಕಾರಣ ಪಂದ್ಯದ ಟಾಸ್ ಆರಂಭ ಕೂಡ ಕಷ್ಟವಾಗಲಿದೆ. ಪಂದ್ಯದ ಮೊದಲ 2 ದಿನಗಳಲ್ಲಿ ಶೇ40ರಷ್ಟು, 3ನೇ ದಿನ ಶೇ 67ರಷ್ಟು, ನಾಲ್ಕನೇ ದಿನ 25ರಷ್ಟು, 5ನೇ ದಿನ 40ರಷ್ಟು ಮಳೆ ಸುರಿಯುವ ಸಾಧ್ಯತೆಯಿದೆ. ಹಾಗಾಗಿ ಪಂದ್ಯ ಬಹುತೇಕ ನಡೆಯುವುದೇ ಡೌಟ್ ಎಂದು ಮುನ್ಸೂಚನೆ ನೀಡಲಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದೆ ಸಬ್ ಏರ್ ಸಿಸ್ಟಂ : ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅತ್ಯಾಧುನಿಕ ಸಬ್ ಏರ್ ಸಿಸ್ಟಂ ಹೊಂದಿದ್ದು, ಇದು ಶೀಘ್ರವಾಗಿ ಮೈದಾನದಲ್ಲಿನ ನೀರನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಮಳೆ ಬಂದು ನಿಂತರೆ ಕೆಲವೇ ನಿಮಿಷಗಳಲ್ಲಿ ಮೈದಾನವನ್ನು ಸಜ್ಜುಗೊಳಿಸಬಹುದು. ಆದರೆ ವರದಿಗಳ ಪ್ರಕಾರ, 5 ದಿನದಾಟಗಳಲ್ಲಿ ಶೇ.60 ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಒಂದು ವೇಳೆ ಸಂಪೂರ್ಣ ಮಳೆ ನಿಂತ ಬಳಿಕ ಸಬ್ ಏರ್ ಸಿಸ್ಟಂ ಬಳಸಿ ಮೈದಾನವನ್ನು ರೆಡಿ ಮಾಡಿದರೂ, ಪಂದ್ಯ ಶುರುವಾಗುವ ವೇಳೆ ಮತ್ತೆ ಮಳೆಯಾಗಬಹುದು. ಹೀಗಾಗಿ ಪಂದ್ಯವನ್ನು ಆಯೋಜಿಸುವುದು ಕಷ್ಟಸಾಧ್ಯ ಎಂದೇ ಹೇಳಬಹುದು.
ಎಷ್ಟು ಗಂಟೆಗೆ ಮ್ಯಾಚ್ ಶುರು? ಯಾವ ಚಾನೆಲ್‌ನಲ್ಲಿ ನೇರ ಪ್ರಸಾರ? ಈ ಸರಣಿಯ ಎಲ್ಲಾ ಪಂದ್ಯಗಳು ಬೆಳಿಗ್ಗೆ 9.30 ರಿಂದ ಶುರುವಾಗಲಿದೆ. ಭಾರತ – ನ್ಯೂಜಿಲೆಂಡ್ ನಡುವಣ ಟೆಸ್ಟ್ ಸರಣಿಯ ಎಲ್ಲಾ ಪಂದ್ಯಗಳು ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ನೇರ ಪ್ರಸಾರವಾಗಲಿದೆ. ಇನ್ನು ಜಿಯೋ ಸಿನಿಮಾ ಆ್ಯಪ್ನಲ್ಲಿ ಉಚಿತವಾಗಿ ಲೈವ್ ವೀಕ್ಷಿಸಬಹುದು.
ಇದನ್ನೂ ಓದಿ : ಮಹಾಮಳೆಗೆ ಸಿಲಿಕಾನ್ ಸಿಟಿ ತತ್ತರ – ಹಲವೆಡೆ ರಸ್ತೆಗಳೇ ಮಾಯ, ಜನಜೀವನ ಅಸ್ತವ್ಯಸ್ತ.. ಎಲ್ಲೆಲ್ಲಿ ಏನೇನಾಯ್ತು?