ಬೆಂಗಳೂರು : ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತ ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲಿ ಅಲ್ಲೋಲ್ಲ ಕಲ್ಲೋಲ ಸೃಷ್ಟಿಸಿದೆ. ಕೇವಲ ಎರಡು ದಿನಗಳ ಮಳೆಗೆ ಸಿಲಿಕಾನ್ ಸಿಟಿ ತತ್ತರಿಸಿ ಹೋಗಿದೆ. ಈ ಹಿಂಗಾರು ಮಳೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೇಲೂ ಮಳೆ ಪರಿಣಾಮ ಬೀರಿದೆ.
ಬೆಂಗಳೂರಿಗೆ ಬಂದಿಳಿದಿದ್ದ ಭಾರತ ನ್ಯೂಜಿಲೆಂಡ್ ತಂಡಗಳಿಗೆ ನಿರಾಸೆ ಎದುರಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆಯಿಂದ ಆರಂವಾಗಬೇಕಿದ್ದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮಳೆಗಾಹುತಿಯಾಗಿದೆ. ಪಂದ್ಯ ಶುರುವಾಗುವುದಿರಲಿ.. ಮಳೆಯಿಂದಾಗಿ ಟಾಸ್ ಕೂಡ ನಡೆಯಲು ವರುಣ ಅವಕಾಶ ಮಾಡಿಕೊಟ್ಟಿಲ್ಲ. ಆ ನಂತರ ಅಂಪೈರ್ಗಳು ಮೊದಲ ದಿನದಾಟವನ್ನು ರದ್ದುಗೊಳಿಸಿದ್ದರು.
ಇನ್ನು ಈ ಟೆಸ್ಟ್ನಲ್ಲಿ 4 ದಿನಗಳು ಬಾಕಿ ಉಳಿದಿದ್ದು, ಹೇಗಾದರೂ ಮಾಡಿ ಮೊದಲ ಟೆಸ್ಟ್ ಪಂದ್ಯವನ್ನು ಪೂರ್ಣಗೊಳಿಸುವ ಸಲುವಾಗಿ ಬಿಸಿಸಿಐ ಮಹತ್ವದ ಹೆಜ್ಜೆ ಇಟ್ಟಿದೆ. ಅದರಂತೆ ಟೆಸ್ಟ್ ಪಂದ್ಯದ ಉಳಿದ ನಾಲ್ಕು ದಿನಗಳ ಸಮಯದಲ್ಲಿ ಬದಲಾವಣೆ ಮಾಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ, ಬೆಂಗಳೂರು ಟೆಸ್ಟ್ನ ಉಳಿದ 4 ದಿನಗಳ ದಿನದಾಟವನ್ನು 9:30 ಕ್ಕೆ ಬದಲಾಗಿ 9:15 ಕ್ಕೆ ಆರಂಭವಾಗಲಿದೆ. ಅದರಂತೆ ಟಾಸ್ ಕೂಡ 9 ಗಂಟೆಗೆ ಬದಲಾಗಿ 8:45 ಕ್ಕೆ ನಡೆಯಲಿದೆ. ಮಳೆಯಿಂದ ಮೊದಲ ದಿನದಾಟ ರದ್ದಾಗಿರುವ ಕಾರಣ, ಮೊದಲ ದಿನದಾಟದ ನಷ್ಟವನ್ನು ಉಳಿದ 4 ದಿನಗಳಲ್ಲಿ ಸರಿದೂಗಿಸಲು ಬಿಸಿಸಿಐ ಈ ತೀರ್ಮಾನಕ್ಕೆ ಬಂದಿದೆ.
ಇನ್ನು ಬೆಂಗಳೂರಿನಲ್ಲಿ ಮುಂದಿನ ನಾಲ್ಕು ದಿನವೂ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಎರಡನೇ ದಿನ ಅಂದರೆ ಇಂದು ಬೆಳಿಗ್ಗೆ ಮಳೆಯ ಮುನ್ಸೂಚನೆ ಇಲ್ಲ. ಆದರೆ 10 ಗಂಟೆಯ ನಂತರ ಶೇ.30ರಿಂದ 40ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಎರಡನೇ ದಿನದದಾಟ ಆರಂಭವಾದರೆ ಆಗಾಗ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಯಾವ ಚಾನೆಲ್‌ನಲ್ಲಿ ನೇರ ಪ್ರಸಾರ? ಭಾರತ-ನ್ಯೂಜಿಲೆಂಡ್ ನಡುವಣ ಟೆಸ್ಟ್ ಸರಣಿಯ ಎಲ್ಲಾ ಪಂದ್ಯಗಳು ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ನೇರ ಪ್ರಸಾರವಾಗಲಿದೆ. ಇನ್ನು ಜಿಯೋ ಸಿನಿಮಾ ಆ್ಯಪ್ ನಲ್ಲಿ ಉಚಿತವಾಗಿ ಲೈವ್ ವೀಕ್ಷಿಸಬಹುದು.
ಭಾರತ vs ನ್ಯೂಜಿಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ :
- ಮೊದಲ ಟೆಸ್ಟ್ – ಅಕ್ಟೋಬರ್ 16 ರಿಂದ 20 (ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು)
- ಎರಡನೇ ಟೆಸ್ಟ್ – 24 ರಿಂದ 28 ಅಕ್ಟೋಬರ್ (ಎಂಸಿಎ ಸ್ಟೇಡಿಯಂ, ಪುಣೆ)
- ಮೂರನೇ ಟೆಸ್ಟ್ – ನವೆಂಬರ್ 1 ರಿಂದ 5 (ವಾಂಖೆಡೆ ಸ್ಟೇಡಿಯಂ, ಮುಂಬೈ)
ಇದನ್ನೂ ಓದಿ : ಬೆಂಗಳೂರಿನ ಲಾಡ್ಜ್ನಲ್ಲಿ ತೀರ್ಥಹಳ್ಳಿ ತಹಶೀಲ್ದಾರ್ ಅನುಮಾನಾಸ್ಪದ ಸಾವು..!