ಆಕ್ಲೆಂಡ್: 2024 ಕೊನೆಗೊಳ್ಳಲು ಇನ್ನು ಕೆಲವೇ ಗಂಟೆಗಳು ಬಾಕಿ ಇದ್ದು, ದೇಶಾದ್ಯಂತ ಸಂಭ್ರಮದ ವಾತಾವರಣ ಮನೆಮಾಡಿರುವಂತೆ ಅತ್ತ ನ್ಯೂಜಿಲೆಂಡ್ನಲ್ಲಿ ಅದ್ದೂರಿಯಾಗಿ ಹೊಸ ವರ್ಷ 2025ನ್ನು ಸ್ವಾಗತಿಸಲಾಗಿದೆ.
ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ಸಿಡಿಮದ್ದು ಮತ್ತು ದೀಪಾಲಂಕಾರಗಳ ಮೂಲಕ 2025ನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ನ್ಯೂಜಿಲೆಂಡ್‌ನ ಅತಿದೊಡ್ಡ ನಗರವಾದ ಆಕ್ಲೆಂಡ್‌ನಲ್ಲಿ, ಐಕಾನಿಕ್ ಸ್ಕೈ ಟವರ್ ಹೊಸ ವರ್ಷ ಸಂಭ್ರಮಾಚರಣೆಯ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸಿತು.
ಇಲ್ಲಿ ಅದ್ಭುತವಾದ ಸಿಡಿಮದ್ದು ಪ್ರದರ್ಶನದೊಂದಿಗೆ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿಯಿತು. ಸಾವಿರಾರು ಜನರು ಸಮುದ್ರ ತೀರದಲ್ಲಿ ಜಮಾಯಿಸಿ, ಆಕಾಶದಲ್ಲಿ ನಡೆಯುತ್ತಿದ್ದ ರೋಮಾಂಚಕ ಬಣ್ಣಗಳಿಂದ ಬೆಳಗುತ್ತಿದ್ದ ಸಿಡಿಮದ್ದುಗಳ ನೋಡಿ ಹರ್ಷೋದ್ಗಾರದಿಂದ ಹೊಸ ವರ್ಷವನ್ನು ಸ್ವಾಗತಿಸಿದರು.
ಯಾವ ದೇಶದಲ್ಲಿ ಹೊಸ ವರ್ಷ ಮೊದಲು ಬರುತ್ತದೆ ?
ವಿಶ್ವದಲ್ಲಿ ಮೊದಲು ಹೊಸ ವರ್ಷವನ್ನು ಒಷಿಯಾನಿಯಾದ ಜನರು ಎದುರುಗೊಳ್ಳುತ್ತಾರೆ. ಹೊಸ ವರ್ಷದ ಆಚರಣೆಗಳು ಸಾಮಾನ್ಯವಾಗಿ ಓಷಿಯಾನಿಯಾ ಮತ್ತು ಆಸ್ಟ್ರೇಲಿಯಾ ದ್ವೀಪಗಳಲ್ಲಿ ಪ್ರಾರಂಭವಾಗುತ್ತವೆ ಎಂದು ಗುರುತಿಸಲಾಗಿದೆ. ಆದಾಗ್ಯೂ, 2025 ರ ಹೊಸ ವರ್ಷವನ್ನು ಆರಂಭದಲ್ಲಿ ಫೆಸಿಫಿಕ್ ಸಾಗರದಲ್ಲಿರುವ ಸಣ್ಣ ದ್ವೀಪ ರಾಷ್ಟ್ರವಾದ ಕಿರಿಬಾಟಿಯಲ್ಲಿ ಸ್ವಾಗತಿಸಲಾಗುತ್ತದೆ.
ಇಲ್ಲಿ ಭಾರತೀಯಕಾಲಮಾನದ ಪ್ರಕಾರ ಡಿಸೆಂಬರ್ 31 ರಂದು ಮಧ್ಯಾಹ್ನ 01:30 ಕ್ಕೆ ಈ ರಾಷ್ಟ್ರವು ಹೊಸ ವರ್ಷವನ್ನು ಸ್ವಾಗತಿಸುತ್ತದೆ. ಇದಾದ ಬಳಿಕ ಇದೇ ದ್ವೀಪ ಸಮೂಹದ ಟೊಂಗಾ ಮತ್ತು ಸಮೋವಾ, ಮತ್ತು ಅಂತಿಮವಾಗಿ, 2025 ರ ಹೊಸ ವರ್ಷವನ್ನು ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಆಚರಿಸಲಾಗುತ್ತದೆ.
ಇದೇ ಸಮಯದಲ್ಲಿ ಬ್ರಿಟನ್ನಲ್ಲಿ ಇನ್ನೂ ಡಿಸೆಂಬರ್ 31ರ ಮುಂಜಾವಿನ 10 ಗಂಟೆಯಾಗಿರುತ್ತದೆ. ದ್ವೀಪ ರಾಷ್ಟ್ರಗಳಲ್ಲಿ ಹೊಸ ವರ್ಷ ಆಗಮಿಸಿದ ಐದೇ ನಿಮಿಷಕ್ಕೆ ನ್ಯೂಜಿಲೆಂಡ್ ದೇಶ ಹೊಸ ವರ್ಷವನ್ನು ಎದುರುಗೊಳ್ಳುತ್ತದೆ (ಭಾರತೀಯ ಕಾಲಮಾನ ಡಿ.31ರ ಮಧ್ಯಾಹ್ನ 3.35). ಇದಾದ ಮೂರು ಗಂಟೆಗಳ ನಂತರ ಆಸ್ಟ್ರೇಲಿಯಾದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಪ್ರಾರಂಭವಾಗುತ್ತದೆ (ಭಾರತೀಯ ಕಾಲಮಾನ ಡಿ.31ರ ಸಂಜೆ 6.30).
ಹೊಸ ವರ್ಷವನ್ನು ಕೊನೆಗೆ ಸ್ವಾಗತಿಸುವ ರಾಷ್ಟ್ರಗಳು ಯಾವುವು?
ಅಮೇರಿಕಾ ಸಂಯುಕ್ತ ಸಂಸ್ಥಾನದ ಸಮೀಪವಿರುವ ದ್ವೀಪ ರಾಷ್ಟ್ರಗಳಾದ ಹೋಲ್ಯಾಂಡ್ ಮತ್ತು ಬೇಕಲ್ ಐಲ್ಯಾಂಡ್ ಹೊಸ ವರ್ಷಾಚರಣೆಯನ್ನು ಕೊನೆಯದಾಗಿ ಆಚರಿಸುತ್ತವೆ. ಅವು ಹೊಸ ವರ್ಷ ಸ್ವಾಗತಿಸುವಾಗ ಭಾರತದಲ್ಲಿ ಜನವರಿ 1ರ ಸಂಜೆ 5.30 ಆಗಿರುತ್ತದೆ. ಅಚ್ಚರಿಯ ಸಂಗತಿಯೆಂದರೆ ಕಡೆಯದಾಗಿ ಹೊಸ ವರ್ಷ ಸ್ವಾಗತಿಸುವ ಎರಡನೇ ರಾಷ್ಟ್ರ ‘ಅಮೆರಿಕನ್ ಸಮೋವಾ’.
ಇದಕ್ಕೂ ಮೊದಲು ಹೊಸ ವರ್ಷ ಸ್ವಾಗತಿಸುವ ಟೊಂಗಕ್ಕೂ ಇಲ್ಲಿಗೂ ಕೇವಲ 558 ಮೈಲುಗಳ ದೂರವಷ್ಟೇ ಅಂತರವಿದೆ ಎನ್ನಲಾಗಿದೆ. ಅರ್ಥಾತ್ ಟೊಂಗಾ ಮೊದಲಾದ ಒಷಿಯಾನಿಯಾದ ದ್ವೀಪ ರಾಷ್ಟ್ರಗಳು ಹೊಸ ವರ್ಷ ಸ್ವಾಗತಿಸಿದ ಬರೋಬ್ಬರಿ ಒಂದು ದಿನದ ನಂತರ ಅಮೇರಿಕಾದ ಸಮೀಪದ ಹೋಲ್ಯಾಂಡ್ ದ್ವೀಪಗಳು ಹೊಸ ವರ್ಷವನ್ನು ಆಚರಿಸುತ್ತವೆ.
ಇದನ್ನೂ ಓದಿ : ನ್ಯೂ ಇಯರ್ ಜೋಶ್ ಕಸಿದ ಆ್ಯಕ್ಸಿಡೆಂಟ್ – ಗೋವಾಗೆ ತೆರಳುತ್ತಿದ್ದಾಗ ಭೀಕರ ಅಪಘಾತ..!