ಬೆಂಗಳೂರು : ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ಹೈಕೋರ್ಟ್ ತೀರ್ಪಿನ ಕುರಿತು ವಸತಿ ಮತ್ತು ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ನೀಡಿದ್ದ ಹೇಳಿಕೆಯು ಅವರಿಗೆ ಕಂಟಕ ತಂದೊಡ್ಡಿದೆ.
ಸಚಿವ ಜಮೀರ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ನೀಡಿದ್ದ ದೂರಿನನ್ವಯ ಸಚಿವರ ವಿರುದ್ಧ ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೈಕೋರ್ಟ್ ಅಡ್ವೊಕೇಟ್ ಜನರಲ್ ಅವರಿಗೆ ಸೂಚನೆ ನೀಡಿದ್ದಾರೆ. ಸದ್ಯ ಸಚಿವ ಜಮೀರ್ ಅಹ್ಮದ್ಗೆ ರಾಜ್ಯಪಾಲರ ಆದೇಶ ಸಂಕಷ್ಟ ತಂದಿಟ್ಟಿದ್ದು, ವಕ್ಫ್ ವಿಚಾರದಲ್ಲಿಯೂ ಜಮೀರ್ ವಿರುದ್ಧ ಕಾಂಗ್ರೆಸ್ನಲ್ಲೇ ಆಕ್ರೋಶ ಕೇಳಿಬಂದಿತ್ತು. ಕಾಂಗ್ರೆಸ್ನ ಬಹುತೇಕ ಮಂತ್ರಿಗಳು, ಶಾಸಕರೇ ಗರಂ ಆಗಿದ್ದರು. ಕಾಂಗ್ರೆಸ್ ಹೈಕಮಾಂಡ್ ಕೂಡ ಜಮೀರ್ ವಿರುದ್ಧ ಅಸಮಾಧಾನಗೊಂಡಿತ್ತು. ಇದೀಗ ರಾಜ್ಯಾಪಾಲರು ಕೂಡ ಕ್ರಮಕ್ಕೆ ಸೂಚಿಸಿದ್ದರಿಂದ ಸಚಿವ ಜಮೀರ್ ಅಹ್ಮದ್ ಖಾನ್ ತಲೆದಂಡ ಆಗುವ ಸಾಧ್ಯತೆಯಿದೆ ಎಂಬ ಚರ್ಚೆಗಳಾಗುತ್ತಿದೆ.
ಹಿನ್ನೆಲೆ : ತಮ್ಮ ವಿರುದ್ಧದ ಆರೋಪ ಸಂಬಂಧ ವಿಚಾರಣೆಗೆ ಅನುಮತಿ ನೀಡಿದ್ದ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ತಿರಸ್ಕರಿಸಿದ್ದ ಹೈಕೋರ್ಟ್, ರಾಜ್ಯಪಾಲರ ಕ್ರಮವನ್ನು ಎತ್ತಿಹಿಡಿದಿತ್ತು. ಬಳಿಕ ಜಮೀರ್ ಅಹ್ಮದ್ ಖಾನ್ ಅವರು ನ್ಯಾಯಾಲಯದ ತೀರ್ಪನ್ನು ‘ರಾಜಕೀಯ ಪ್ರೇರಿತ ತೀರ್ಪು’ ಎಂದು ಹೇಳಿಕೆ ನೀಡಿದ್ದರು. ಆ ಬಳಿಕ ಹೈಕೋರ್ಟ್ ತೀರ್ಪನ್ನು ಜಮೀರ್ ನಿಂದಿಸಿದ್ದಾರೆ. ನ್ಯಾಯಾಲಯದ ಘನತೆಗೆ ಜಮೀರ್ ಹೇಳಿಕೆ ಕುಂದು ತಂದಿದೆ ಎಂದು ಕ್ರಮಕ್ಕೆ ಆಗ್ರಹಿಸಿ ಟಿಜೆ ಅಬ್ರಹಾಂ ಅವರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.
ಅಬ್ರಹಾಂ ದೂರಿನಲ್ಲಿ ಏನಿದೆ? ಹೈಕೋರ್ಟ್ ತೀರ್ಪನ್ನು ಜಮೀರ್ ನಿಂದಿಸಿದ್ದಾರೆ. ಹೈಕೋರ್ಟ್ ತೀರ್ಪು ರಾಜಕೀಯ ಪ್ರೇರಿತ ಎಂದಿದ್ದಾರೆ. ನ್ಯಾಯಾಲಯದ ಘನತೆಗೆ ಜಮೀರ್ ಹೇಳಿಕೆ ಕುಂದು ತಂದಿದೆ. ರಾಜಕೀಯ ಚಟುವಟಿಕೆಗೆ ತೀರ್ಪನ್ನು ಹೋಲಿಸಿದ್ದು ಅಕ್ಷಮ್ಯ, ಜಮೀರ್ ವಿರುದ್ಧ ಮೊಕದ್ದಮೆ ದಾಖಲಿಸಲು ಅನುಮತಿ ನೀಡಿ ಎಂದು ದೂರು ನೀಡಿದ್ದಾರೆ. ಇನ್ನು ಕೇಸ್ ದಾಖಲಿಸಲು ಅಡ್ವೊಕೇಟ್ ಜನರಲ್ ತೀರ್ಮಾನ ಮಾಡಿರಲಿಲ್ಲ. ಹೀಗಾಗಿ ಜಮೀರ್ಗೆ ರಕ್ಷಣೆ ಒದಗಿಸುವ ಉದ್ದೇಶ ಇದರ ಹಿಂದಿದೆ. ನನ್ನ ಅರ್ಜಿಯನ್ನು ಅಡ್ವೊಕೇಟ್ ಜನರಲ್ ಬಾಕಿ ಉಳಿಸಿಕೊಂಡಿದ್ದಾರೆ. ತ್ವರಿತವಾಗಿ ಅರ್ಜಿ ವಿಲೇವಾರಿಗೆ ಸೂಚನೆ ಕೊಡಿ ಎಂದು ಟಿ.ಜೆ.ಅಬ್ರಹಾಂ ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ಇದೀಗ ಸಚಿವ ಜಮೀರ್ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಅಡ್ವೊಕೇಟ್ ಜನರಲ್ಗೆ ರಾಜ್ಯಪಾಲರು ಪತ್ರದ ಮೂಲಕ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ಬೈ ಎಲೆಕ್ಷನ್ ಬಹಿರಂಗ ಪ್ರಚಾರಕ್ಕೆ ಇಂದೇ ತೆರೆ.. ಮೂರೂ ಕ್ಷೇತ್ರಗಳಲ್ಲಿಂದು ಘಟಾನುಘಟಿಗಳ ಅಬ್ಬರ..!