“ಘಟಶ್ರಾದ್ಧ” ಚಿತ್ರ 1978ರಲ್ಲಿ ಬಿಡುಗಡೆಯಾಗಿ ಕನ್ನಡದ ಹೊಸ ಅಲೆಯ ಚಿತ್ರಗಳಲ್ಲಿ ಹೊಸ ಸಂಚಲನ ಮೂಡಿಸಿ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಮೆಚ್ಚಿಗೆ ಪಡೆದಿತ್ತು. ಆ ವರ್ಷ ರಾಷ್ಟ್ರ್ರ ಪ್ರಶಸ್ತಿ ಸ್ಪರ್ಧೆಯಲ್ಲಿದ್ದ ಘಟಾನುಘಟಿ ಚಿತ್ರನಿರ್ದೇಶಕರುಗಳಾದ ಸತ್ಯಜಿತ್ ರೇ, ಮೃಣಾಲ್ ಸೆನ್, ಶ್ಯಾಮ್ ಬೆನೆಗಲ್, ಅಡೂರ್ ಗೋಫಾಲಕೃಷ್ಣನ್, ಅರವಿಂದನ್, ಜಾನ್ ಅಬ್ರಹಾಂ, ಗಿರೀಶ್ ಕಾರ್ನಾಡ್ ಅವರ ಚಿತ್ರಗಳ ಜೊತೆ ಸ್ಪರ್ಧಿಸಿ ಸ್ವರ್ಣಪದಕ ಪಡೆದ ಈ ಚಿತ್ರ ಗಿರೀಶ್ ಕಾಸರವಳ್ಳಿಯವರ ಪ್ರಥಮ ಚಿತ್ರವೂ ಹೌದು.
ಗಿರೀಶ್ ಕಾಸರವಳ್ಳಿಯವರಿಗೆ ಕೇವಲ 26 ವರ್ಷವಾಗಿದ್ದಾಗ ನಿರ್ದೇಶಿಸಿದ ಈ ಚಿತ್ರವು ಅದರ ವಸ್ತುವಿಗೆ, ದೃಶ್ಯ ಸೌಷ್ಠವಕ್ಕೆ, ಸಿನಿಮಾತ್ಮಕ ಶಕ್ತಿಗಾಗಿ ಸ್ವತಃ, ರೇ, ಸೆನ್, ಅಡೂರ್ ಅವರಿಂದ ಪ್ರಶಂಸಿಸಲ್ಪಟ್ಟಿತ್ತು. ಕೇಂದ್ರ ಸರ್ಕಾರದ ಸಂಸ್ಥೆಯಾದ ಚಲನಚಿತ್ರ ನಿರ್ದೇಶನಾಲಯ 2009ರಲ್ಲಿ ಸಿನಿಮಾದ ಶತಮಾನೋತ್ಸವದ ನೆನಪಿಗಾಗಿ 100 ವರ್ಷದ ಸಿನಿಮಾ ಇತಿಹಾಸದಲ್ಲಿ ತಯಾರಾದ 20 ಭಾರತೀಯ ಶ್ರೇಷ್ಠ ಚಿತ್ರಗಳನ್ನು ಆಯ್ಕೆ ಮಾಡಿತ್ತು. ಅವುಗಳಲ್ಲಿ ಘಟಶ್ರಾದ್ಧವೂ ಒಂದು ಎಂದು ಭಾರತೀಯ ಸಿನಿಮಾ ವಿಮರ್ಶಕರು, ನಿರ್ದೇಶಕರು ಆರಿಸಿದ್ದರು.
ಚಿತ್ರ ನೋಡಿ ಮೆಚ್ಚಿದ್ದ ಹಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕರುಗಳಾದ, ಟ್ಯಾಕ್ಸಿ ಡ್ರೈವರ್, ಡಿಪಾರ್ಟೆಡ್ ಚಿತ್ರ ಖ್ಯಾತಿಯ ಮಾರ್ಟಿನ್ ಸ್ಕಾರ್ಸೆಸ್ಸಿ ಹಾಗೂ ಸ್ಟಾರ್ ವಾರ್ಸ್ ಖ್ಯಾತಿಯ ಜಾರ್ಜ್ ಲ್ಯೂಕಾಸ್ ಈ ಚಿತ್ರದ ಪುನರ್ ರೂಪೀಕರಣಕ್ಕೆ ಮುಂದಾಗಿದ್ದರು. ಸೆಲ್ಯೂಲಾಯ್ದ್ ಮ್ಯಾನ್ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಭಾರತೀಯ ಚಿತ್ರ ನಿರ್ದೇಶಕ ಶಿವೇಂದ್ರ ಸಿಂಗ್ ದುಂಗಾರ್‌ಪುರ್ ಅವರ ಸಿನಿಮಾ ಪೌಂಡೇಶನ್ ಈ ಇಡೀ ಪುನರ್ ನವೀಕರಣದ ರೂವಾರಿಯಾಗಿದ್ದರು.
ಇದೀಗ ಆ ಚಿತ್ರಕ್ಕೆ ಇನ್ನೊಂದು ವಿಶೇಷ ಗರಿ ಸೇರುತ್ತಿದೆ. ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಅಗ್ರಸ್ಥಾನ ಪಡೆದ ವೆನಿಸ್ ಚಿತ್ರೋತ್ಸವದಲ್ಲಿ ಈ ಚಿತ್ರವನ್ನು ವಿಶ್ವ ಸಿನಿಮಾದ ಒಂದು ಕ್ಲಾಸಿಕ್ ಚಿತ್ರ ಎಂದು ಪರಿಗಣಿಸಿ ಪ್ರದರ್ಶಿಸುತ್ತಿದೆ. ಸಾಮಾನ್ಯವಾಗಿ ಚಿತ್ರೋತ್ಸವದಲ್ಲಿ ಒಂದು ಚಿತ್ರಕ್ಕೆ ಎರಡು ಪ್ರದರ್ಶನಗಳಿದ್ದರೆ ಈ ಚಿತ್ರದ ಮೂರು ಪ್ರದರ್ಶನಗಳಿವೆ. ಚಿತ್ರನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರನ್ನು ವಿಶೇಷ ಆಹ್ವಾನ ನೀಡಿ ಕರೆಸಿಕೊಳ್ಳುತ್ತಿದೆ. ಇದು ವೆನಿಸ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಮೊದಲ ಕನ್ನಡ ಚಿತ್ರ.
ರಾಷ್ಟ್ರ ಪತಿಗಳ ಸ್ವರ್ಣ ಪದಕವಲ್ಲದೇ ಕರ್ನಾಟಕ ರಾಜ್ಯ ಪ್ರಶಸ್ತಿಯಲ್ಲಿ ಚಿನ್ನದ ಪದಕ ಗೆದ್ದ ಈ ಚಿತ್ರದ ನಿರ್ಮಾಪಕರು ಸದಾನಂದ ಸುವರ್ಣರು. ಡಾ. ಯು.ಆರ್.ಅನಂತಮೂರ್ತಿಯವರ ಸಣ್ಣಕತೆ ಆಧರಿಸಿ, ಚಿತ್ರಕಥೆಯನ್ನು ಬರೆದು ನಿರ್ದೇಶಿಸಿದವರು ಗಿರೀಶ್ ಕಾಸರವಳ್ಳಿ. ಎಸ್.ರಾಮಚಂದ್ರರ ಛಾಯಾಗ್ರಹಣ ಇದ್ದ ಈ ಚಿತ್ರದ ಸಂಗೀತ ಬಿ.ವಿ.ಕಾರಂತರದ್ದಾಗಿದ್ದು ಕಲಾನಿರ್ದೇಶನ ಕೆ.ವಿ ಸುಬ್ಬಣ್ಣನವರದಾಗಿತ್ತು. ಎಲ್ಲ ಹೊಸ ಮುಖಗಳೇ ಇದ್ದ ಈ ಚಿತ್ರ 1978 ರಲ್ಲಿ ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡಿತ್ತು.
ಇದನ್ನೂ ಓದಿ : ಸೆ.2ಕ್ಕೆ ಕಿರಣ್ ರಾಜ್ ನಟನೆಯ ‘ರಾನಿ’ ಚಿತ್ರದ ಟ್ರೈಲರ್ ರಿಲೀಸ್..!