ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ಶಿಲ್ಪಾ ತುಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈಗಾಗಲೇ ‘ಗೋಲ್ಡನ್ ಮೂವೀಸ್’ ಬ್ಯಾನರ್ ಮೂಲಕ ಕನ್ನಡದ ಮಳೆಯಲಿ ಜೊತೆಯಲಿ, ಕೂಲ್.. ಸಖತ್ ಹಾಟ್ ಮಗಾ, ಮುಗುಳು ನಗೆ, ಗೀತಾ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಕರಾವಳಿ ಮೂಲದವರಾದ ಶಿಲ್ಪಾ ಗಣೇಶ್ ಅವರು ಇದೀಗ ತುಳು ಭಾಷೆಯಲ್ಲೂ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಡಿಸೆಂಬರ್ ತಿಂಗಳಿನಿಂದ ಈ ಚಿತ್ರದ ಶೂಟಿಂಗ್ ಆರಂಭ ಆಗಲಿದೆ. ಈ ಸಿನಿಮಾಗೆ ಸಂದೀಪ್ ಬೆದ್ರ ನಿರ್ದೇಶಕರಾಗಿದ್ದು, ಮೋಹನ್ ಭಟ್ಕಳ್ ಚಿತ್ರಕಥೆ ಬರೆದಿದ್ದು, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡಲಿದ್ದಾರೆ. ಸಿನಿಮಾದ ಕತೆ, ಚಿತ್ರಕತೆ, ತಂತ್ರಜ್ಞರು ಅಂತಿಮವಾಗಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಚಾಲ್ತಿಯಲ್ಲಿವೆ.
ಹರಿಕೃಷ್ಣ ಬಂಟ್ವಾಳ್ ಪುತ್ರ ನಿತ್ಯಪ್ರಕಾಶ್ ಬಂಟ್ವಾಳ್ ಅವರು ಶಿಲ್ಪಾ ಗಣೇಶ್ ನಿರ್ಮಾಣದ ಈ ಸಿನಿಮಾದಲ್ಲಿ ಹೀರೋ ಆಗಿ ಅಭಿನಯಿಸಲಿದ್ದಾರೆ. ನಾಯಕಿಯ ಪಾತ್ರಕ್ಕೆ ಹೊಸಬರನ್ನು ಪರಿಚಯಿಸುವ ಸಾಧ್ಯತೆ ಇದೆ. ಅಂದಹಾಗೆ, ಗಣೇಶ್ ನಾಯಕತ್ವದಲ್ಲಿ ಅನೇಕ ಸಿನಿಮಾಗಳನ್ನು ಶಿಲ್ಪಾ ಗಣೇಶ್ ನಿರ್ಮಾಣ ಮಾಡಿದ್ದಾರೆ. ಇದೀಗ ಅವರಿಗೆ ತವರಿನಲ್ಲಿ ಒಂದು ಸಿನಿಮಾವನ್ನು ನಿರ್ಮಾಣ ಮಾಡಬೇಕು ಎಂಬ ಆಸೆ ಹುಟ್ಟಿಕೊಂಡಿದೆ. ಅದರ ಫಲವಾಗಿ ಈ ತುಳು ಸಿನಿಮಾವೊಂದು ಸೆಟ್ಟೇರುತ್ತಿದೆ.
ಸಿನಿಮಾ ಕೌಟುಂಬಿಕ ಕತೆಯನ್ನು ಒಳಗೊಂಡಿದ್ದು, ಹಾಸ್ಯ ಪ್ರಧಾನ ಆಗಿರಲಿದೆ. ಮಂಗಳೂರು, ಉಡುಪಿ, ಮೂಡುಬಿದಿರೆ, ಬಂಟ್ವಾಳ ಸೇರಿದಂತೆ ಕರಾವಳಿ ಭಾಗದಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಚಿತ್ರದ ಹಾಡುಗಳನ್ನು ಕೆಲವು ಬೇರೆ ಲೊಕೇಶನ್ಗಳಲ್ಲಿ ಚಿತ್ರೀಕರಣ ಮಾಡುವ ಉದ್ದೇಶ ಇದೆ ಎಂದು ನಿರ್ದೇಶಕ ಸಂದೀಪ್ ಹೇಳಿದ್ದಾರೆ.
ಇದನ್ನೂ ಓದಿ : ಮೈಸೂರಿನಲ್ಲಿ ಸೋನು ಗೌಡ ನೋಡಿ ಸೆಲ್ಫಿಗೆ ಮುಗ್ಗಿಬಿದ್ದ ಜನ – ಹೆಸರು ಕೂಗಿ ಬೆನ್ನಿಂದೆ ಬಿದ್ದಿದ್ದಕ್ಕೆ ಸೋನು ಗರಂ..!