ಬೆಂಗಳೂರು : ರಾಜಕಾರಣಿ ಸಹೋದರಿ ಎಂದು ನಂಬಿಸಿ ಮಹಿಳೆಯೊಬ್ಬಳು ಚಿನ್ನದ ಅಂಗಡಿ ಮಾಲೀಕರಿಗೆ ಕೋಟಿ ಕೋಟಿ ಹಣ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆರ್.ಆರ್.ನಗರದ ನಿವಾಸಿ ಐಶ್ವರ್ಯಾ ಗೌಡ ಅಲಿಯಾಸ್ ನವ್ಯಶ್ರೀ ವಿರುದ್ಧ ವಂಚನೆ ಆರೋಪ ಕೇಳಿಬಂದಿದ್ದು, ಐಶ್ವರ್ಯಾ ಗೌಡ ತಾನು ರಾಜಕಾರಣಿಯ ಸಹೋದರಿ ಎಂದು ವರಾಹಿ ‘ವರ್ಲ್ಡ್ ಆಫ್ ಗೋಲ್ಡ್’ ಚಿನ್ನದ ಅಂಗಡಿ ಮಾಲಕಿ ವನಿತಾ ಐತಾಳ್ ಅವರನ್ನು ಪರಿಚಯಿಸಿಕೊಂಡು, ನನಗೆ ಹಲವು ರಾಜಕಾರಣಿಗಳ ಪರಿಚಯವಿದೆ. ನಾನು ದೊಡ್ಡ ಬ್ಯುಸಿನೆಸ್ ವುಮೆನ್. ನಿಮಗೆ ಒಳ್ಳೆ ವ್ಯಾಪಾರ ವಹಿವಾಟು ನೀಡುತ್ತೇನೆ. ನಿಮ್ಮ ಉದ್ಯಮಕ್ಕೆ ಸಹಾಯ ಮಾಡುತ್ತೇನೆ ಎಂದು ಬರೋಬ್ಬರಿ 9.14 ಕೋಟಿ ರೂ. ಚಿನ್ನ ಪಡೆದು ವಂಚಿಸಿದ್ದಾಳೆ.
9.14 ಕೋಟಿ ರೂ ಮೌಲ್ಯದ 14 ಕೆಜಿ 660 ಗ್ರಾಂ ಚಿನ್ನ ಖರೀದಿಸಿರುವ ಐಶ್ವರ್ಯಾ ಗೌಡ, ವನಿತಾ ಐತಾಳ್ ಅವರಿಗೆ ಹಂತ ಹತವಾಗಿ ವಂಚನೆ ಮಾಡಿದ್ದಾಳೆ. ಈ ಸಂಬಂಧ ಆರೋಪಿ ಐಶ್ವರ್ಯಾ ಗೌಡ, ಆಕೆಯ ಪತಿ ಕೆ.ಎನ್ ಹರೀಶ್ ವಿರುದ್ಧ ಚಂದ್ರಾಲೇಔಟ್ ಠಾಣೆಯಲ್ಲಿ FIR ದಾಖಲಾಗಿದೆ.
ಇನ್ನು 2023 ಅಕ್ಟೋಬರ್ನಿಂದ 2024 ಏಪ್ರಿಲ್ ವರೆಗೆ ಹಂತ ಹಂತವಾಗಿ ಚಿನ್ನ ಪಡೆದಿದ್ದ ವಂಚಕಿ ಐಶ್ವರ್ಯ ಗೌಡ, ಕನ್ನಡದ ನಟ ಧರ್ಮೇಂದ್ರ ಅವರ ಹೆಸರನ್ನೂ ಈ ಪ್ರಕರಣದಲ್ಲಿ ಬಳಸಿಕೊಂಡಿದ್ದಾಳೆ. ಅಷ್ಟೆ ಅಲ್ಲದೇ ವನಿತಾ ಐತಾಳ್ ಅವರು ವಡವೆ ಖರೀದಿಸಿದ ಹಣ ವಾಪಸ್ ಕೇಳಿದ್ದಕ್ಕೆ ರಾಜಕೀಯ ಪ್ರಭಾವ ಇದೆ ಎಂದು ಜೀವ ಬೆದರಿಕೆ ಹಾಕಿದ ಆರೋಪ ಕೂಡ ಕೇಳಿಬಂದಿದೆ.
ಇದನ್ನೂ ಓದಿ : ಸಿ.ಟಿ ರವಿ ಅಶ್ಲೀಲ ಪದ ಬಳಕೆ ಪ್ರಕರಣ ತನಿಖೆ ಸಿಐಡಿ ಹೆಗಲಿಗೆ : ಗೃಹ ಸಚಿವ ಪರಮೇಶ್ವರ್!