ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ಮಾಡಿದ್ದಾರೆ. 20ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ಮಾಡಿ, ಸೈಟ್ ಹಂಚಿಕೆ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿರುವ ಮುಡಾ ಹಗರಣ ಪ್ರಕರಣ ಸಂಬಂಧ ಮೈಸೂರು ಲೋಕಾಯಕ್ತ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಈಗಾಗಲೇ ಸ್ನೇಹಮಯಿ ಕೃಷ್ಣರಿಂದ ದಾಖಲೆ ಪಡೆದಿದ್ದ ಇಡಿ, ಬೆಂಗಳೂರು ಕಚೇರಿಗೆ ಕರೆಸಿಕೊಂಡು ಮಾಹಿತಿ ಪಡೆದಿದ್ದರು. ಇದೀಗ ಸ್ನೇಹಮಯಿ ಕೃಷ್ಣ ನೀಡಿದ್ದ ದೂರಿನ ಆಧಾರದ ಮೇಲೆ ED ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಮುಡಾ ಅಕ್ರಮ ಆರೋಪ ಬೆನ್ನಲ್ಲೇ ಮುಡಾ ಅಧ್ಯಕ್ಷ ಸ್ಥಾನಕ್ಕೆ ಕೆ. ಮರೀಗೌಡ ರಾಜೀನಾಮೆ ನೀಡಿದ್ದಾರೆ. ಮುಡಾ ಅಧ್ಯಕ್ಷ ಮರಿಗೌಡ ಕಿಕ್ಔಟ್ ಆದ ಬೆನ್ನಲ್ಲೇ ED ಎಂಟ್ರಿ ಕೊಟ್ಟಿದೆ. ಏಕಾಏಕಿ ಮೈಸೂರಿನ ಮುಡಾ ಕಚೇರಿ ಮೇಲೆ ದಾಳಿ ಮಾಡಿದ ED ನಿರಂತರ ಶೋಧ ನಡೆಸುತ್ತಿದ್ದು, ಪ್ರತಿ ಫೈಲ್ಗಳನ್ನೂ ಬಿಡದೇ ಪರಿಶೀಲನೆ ನಡೆಸುತ್ತಿದೆ.
ಇನ್ನು ಮೈಸೂರು ಮಾತ್ರವಲ್ಲದೇ ED ಅಧಿಕಾರಿಗಳು, ಸಿಎಂ ಪತ್ನಿ ಕೇಸ್ನ 4ನೇ ಆರೋಪಿ ಭೂಮಿ ಮಾಲೀಕ ದೇವರಾಜು ಮನೆ ಕೂಡ ದಾಳಿ ಮಾಡಿದ್ದಾರೆ. ಬೆಂಗಳೂರಿನ ಕೆಂಗೇರಿಯಲ್ಲಿರುವ ದೇವರಾಜು ಮನೆ ಮೇಲೆ ದಾಳಿ ಮಾಡಿದ ಅಧಿಕಾರಿಗಳು, ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಚಿತ್ರದುರ್ಗ : ಕಾಲೇಜಿನ 3ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ..!