ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸೈಟ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ತನಿಖೆ ಚುರುಕುಗೊಂಡಿದ್ದು, ಈಗ ವಿಧಾನಸೌಧದ ಅಂಗಳಕ್ಕೆ ಬಂದು ತಲುಪಿದೆ.
ಹೌದು.. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬೈರತಿ ಸುರೇಶ್ ಅವರ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ED ನೋಟಿಸ್ ಜಾರಿ ಮಾಡಿದ್ದು, ಇಂದು (ಡಿಸೆಂಬರ್ 3) ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ED ಅಧಿಕಾರಿಗಳು ಈಗ ಹಂತ ಹಂತವಾಗಿ ತನಿಖೆ ಮುಂದುವರಿಸಿದ್ದು, ಈಗಾಗಲೇ ಮುಡಾ ಹಾಲಿ ಮತ್ತು ಮಾಜಿ ಅಧಿಕಾರಿಗಳನ್ನು ವಿಚಾರಣೆ ನಡೆಸಿದೆ. ಇದೀಗ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳತ್ತ ED ಅಧಿಕಾರಿಗಳ ಚಿತ್ತ ನೆಟ್ಟಿದೆ. ಅದರಂತೆ ಇಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ED ಸೂಚಿಸಿದೆ.
ಇನ್ನು ಈ ಬೆನ್ನಲ್ಲೇ ಸಚಿವ ಭೈರತಿ ಸುರೇಶ್ ಅವರ ಬುಡಕ್ಕೂ ಮುಡಾ ಸಂಕಷ್ಟ ಬರುವ ಸಾಧ್ಯತೆಗಳಿದೆ ಎಂದು ಹೇಳಲಾಗಿದೆ. ಶಾಂತಿನಗರದಲ್ಲಿನ ಇ.ಡಿ. ಕಚೇರಿಯಲ್ಲಿ ಇಂದು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ವಿಚಾರಣೆ ನಡೆಯಲಿದ್ದು, ಮುಡಾ ಹಗರಣ ಸಂಬಂಧದ ದಾಖಲೆಗಳ ಸಮೇತ ಬರಲು ED ಅಧಿಕಾರಿಗಳು ಸೂಚಿಸಿದ್ದಾರೆ. ಹಾಗಾಗಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ಗೂ ವಿಚಾರಣೆ ಭೀತಿ ಕಾಡ್ತಿದೆ. ಮತ್ತೊಂದೆಡೆ ಸಿಎಂ ಸಿದ್ದು ಆಪ್ತ ರವಿಕುಮಾರ್ಗೆ ಮತ್ತೆ ED ನೋಟಿಸ್ ನೀಡಿದ್ದು, ಅವರಿಗೂ ವಿಚಾರಣೆಗೆ ಬರುವಂತೆ ಸೂಚಿಸಿದೆ.
ಇನ್ನು ಲೋಕಾ ಪೊಲೀಸರ ತನಿಖೆಯಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ಯಾರಿಗೂ ಹೆದರುವ ಅವಶ್ಯಕತೆಯಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್ ನಿನ್ನೆ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ : ಬಿಗ್‌ಬಾಸ್ ಮನೆಯಿಂದ ಹೊರಬಂದ ಶೋಭಾ ಶೆಟ್ಟಿ – ಸುದೀರ್ಘ ಪತ್ರ ಬರೆದು ಕಿಚ್ಚನಿಗೆ ಟ್ಯಾಗ್.. ಹೇಳಿದ್ದೇನು?