ಅಕ್ಟೋಬರ್ 11ರಿಂದ ಆರಂಭಗೊಳ್ಳಲಿರುವ 2024-25ರ ರಣಜಿ ಟ್ರೋಫಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಂಭವನೀಯ ಆಟಗಾರರ ಪಟ್ಟಿಯನ್ನು ಪ್ರಕಟ ಮಾಡಿದೆ. 37 ಆಟಗಾರರ ಪಟ್ಟಿಯಲ್ಲಿ ಭಾರತ ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್‌ರ ಪುತ್ರ ಸಮಿತ್ ದ್ರಾವಿಡ್ ಸ್ಥಾನ ಪಡೆದಿದ್ದಾರೆ.
ಕಿರಿಯರ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿ, ಇತ್ತೀಚೆಗೆ ಮುಕ್ತಾಯಗೊಂಡ 3ನೇ ಆವೃತ್ತಿಯ ಮಹಾರಾಜ ಟ್ರೋಫಿಯಲ್ಲಿ ಆಡಿದ್ದ ಸಮಿತ್, ಇದೀಗ ರಾಜ್ಯ ಹಿರಿಯರ ತಂಡವನ್ನೂ ಪ್ರತಿನಿಧಿಸುವ ನಿರೀಕ್ಷೆಯಲ್ಲಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪ್ರಕಟಿಸಿರುವ ಪಟ್ಟಿಯಲ್ಲಿ ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ, ಕೆಎಲ್ ರಾಹುಲ್, ಪ್ರಸಿದ್ಧ್ ಕೃಷ್ಣ, ವೈಶಾಖ್ ವಿಜಯಕುಮಾರ್, ಶ್ರೇಯಸ್ ಗೋಪಾಲ್ ಸೇರಿದಂತೆ ಹಲವು ಅನುಭವಿ ಆಟಗಾರರು ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಬಿಸಿಸಿಐ ವಯೋಮಿತಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಸಮಿತ್ ದ್ರಾವಿಡ್, ಸಮರ್ಥ್ ನಾಗರಾಜ್, ಸ್ಮರಣ್ ಆರ್, ಕೃತಿಕ್ ಕೃಷ್ಣ, ಜಾಸ್ಪರ್ ಇ.ಜೆ ಸೇರಿದಂತೆ ಹಲವು ಯುವ ಆಟಗಾರರಿಗೆ ಈ ಬಾರಿ ಮಣೆ ಹಾಕಲಾಗಿದೆ.
ಸಂಭವನೀಯ ತಂಡದಲ್ಲಿ ಒಟ್ಟು 37 ಆಟಗಾರರ ಹೆಸರಿದ್ದರೂ, ಇವರಲ್ಲಿ ಕೇವಲ 15 ಆಟಗಾರರು ಮಾತ್ರ ರಣಜಿ ಟೂರ್ನಿಗೆ ಆಯ್ಕೆಯಾಗಲಿದ್ದಾರೆ. ಈ ಬಾರಿ ಕಿರಿಯ ಆಟಗಾರರಿಗೆ ಹೆಚ್ಚಿನ ಮಣೆ ಹಾಕಿರುವುದರಿಂದ ಅನುಭವಿ ಹಾಗೂ ಯುವ ಆಟಗಾರರನ್ನು ಒಳಗೊಂಡ ಕರ್ನಾಟಕ ತಂಡವನ್ನು ನಿರೀಕ್ಷಿಸಬಹುದು. ಸದ್ಯದಲ್ಲೇ ಕೆಎಸ್‌ಸಿಎ ಅಂತಿಮ 15 ಆಟಗಾರರ ಪಟ್ಟಿ ಪ್ರಕಟ ಮಾಡಲಿದೆ. ‘ಸಿ’ ಗುಂಪಿನಲ್ಲಿರುವ ಕರ್ನಾಟಕ, ಮೊದಲ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಸೆಣಸಲಿದೆ.
ಇದನ್ನೂ ಓದಿ : ‘UI’ ತಲೆಗೆ ಹುಳ ಬಿಡೋ ಸಿನಿಮಾ ಅಲ್ಲ, ಹುಳ ತೆಗೆಯೋ ಸಿನಿಮಾ – ರಿಯಲ್ ಸ್ಟಾರ್ ಉಪ್ಪಿ..!