ನಾಯಕನಾಗಿ, ನಿರ್ಮಾಪಕರಾಗಿ, ಬರಹಗಾರನಾಗಿಯೂ ಗುರುತಿಸಿಕೊಂಡಿರುವ ಡಾಲಿ ಧನಂಜಯ್ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟರಲ್ಲಿ ಒಬ್ಬರು. ಇದೀಗ ಟಾಲಿವುಡ್ ಮತ್ತು ಕಾಲಿವುಡ್‌ನಲ್ಲೂ ಬ್ಯುಸಿಯಾಗಿರುವ ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.
ಹೌದು, ನಟರಾಕ್ಷಸ ಡಾಲಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿ ಡಾಲಿ ನಟಿಸಲಿರುವ ಮುಂಬರುವ ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ನಟ ಡಾಲಿ ಜಿ… ಮುಂದೆ ಒಂದಿಷ್ಟು ಪ್ರಶ್ನಾರ್ಥಕ ಚಿಹ್ನೆ ಹಾಕಿ ನರ ನರ ಜಿಂಗೋ ನರನಾಡಿ ಜಿಂಗೋ! ಎಂದು ಕ್ಯಾಪ್ಷನ್ ಬರೆದಿದ್ದಾರೆ. ಈ ಮೂಲಕ ತಮ್ಮ ಮುಂದಿನ ಸಿನಿಮಾದ ಹೆಸರು ಜಿಂಗೋ ಎಂದು ಸೂಚನೆ ನೀಡಿದ್ದಾರೆ.
ಈ ಚಿತ್ರಕ್ಕೆ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಬರೆದ ‘ಡೇರ್ಡೆವಿಲ್ ಮುಸ್ತಫಾ’ ಕಥೆಯನ್ನು ಆಧರಿಸಿ ಅಬಚೂರಿನ ಪರಿಸರವನ್ನು ತೆರೆಗೆ ತಂದಿದ್ದ, ಜೊತೆಗೆ ಉತ್ತಮವಾದ ಸಂದೇಶವನ್ನೂ ರವಾನಿಸಿದ್ದ ಶಶಾಂಕ್ ಸೋಗಲ್ ಜಿಂಗೋ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಡಾಲಿ ಬರ್ತಡೇ ಅಂಗವಾಗಿ ಜಿಂಗೋ ಫಸ್ಟ್ ಝಲಕ್ ರಿಲೀಸ್ ಮಾಡಲಾಗಿದೆ. ರಾಜಕಾರಣಿಯಾಗಿ ನಟರಾಕ್ಷಸ ಕಾಣಿಸಿಕೊಂಡಿದ್ದು, ಉದ್ದ ಕೂದಲು ಬಿಟ್ಟು ಖಡಕ್ ಡೈಲಾಗ್ ಹೊಡೆಯುತ್ತಾ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಜಿಂಗೋ ಅಸಲಿಗೆ ರಾಜಕಾರಣಿನಾ ಅಥವಾ ಕ್ರಾಂತಿಕಾರಿನ ಎಂಬ ಕುತೂಹಲ ಹುಟ್ಟುಹಾಕಿದೆ. ಚಿತ್ರಕ್ಕೆ ಹಾರಿಸ್ ಅಹಮದ್ ಕಥೆ ಚಿತ್ರಕಥೆ ಬರೆದಿದ್ದು, ಶಶಾಂಕ್ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ತ್ರಿಷೂಲ್ ವಿಷನರಿ ಸ್ಟುಡಿಯೋಸ್ ಹಾಗೂ ಡಾಲಿ ಪಿಕ್ಚರ್ಸ್ ಬ್ಯಾನರ್ ನಡಿ ಬಿ ನರೇಂದ್ರ ರೆಡ್ಡಿ ಹಾಗೂ ಡಾಲಿ ಧನಂಜಯ್ ಜಿಂಗೋ ಚಿತ್ರ ನಿರ್ಮಾಣ ಮಾಡುತ್ತಿದ್ದು, ರಾಘವೇಂದ್ರ ಮಾಯಕೊಂಡ ಸಂಭಾಷಣೆ ಬರೆದಿದ್ದಾರೆ. ಜಿಂಗೋ ಎಂದರೆ ವ್ಯಕ್ತಿಯೋರ್ವನ ನಿಕ್ ನೇಮ್ ಎನ್ನುತ್ತದೆ ಚಿತ್ರತಂಡ. ಹಾಗಿದ್ರೆ ಯಾರು ಜಿಂಗೋ ಎಂಬುದು ಸತ್ಯಕ್ಕಿರುವ ಕುತೂಹಲ.
ನವನೀತ್ ಶ್ಯಾಮ್ ಸಂಗೀತ, ಶರತ್ ವಸಿಷ್ಠ ಸಂಕಲನ, ರಾಹುಲ್ ರಾಯ್ ಛಾಯಾಗ್ರಹಣ ಚಿತ್ರಕ್ಕಿದೆ.
ಶಶಾಂಕ್ ಸೋಗಲ್ ನಿರ್ದೇಶನದ ಚೊಚ್ಚಲ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾವನ್ನು ಡಾಲಿ ಧನಂಜಯ್ ಅವರು ತಮ್ಮ ಡಾಲಿ ಪಿಕ್ಚರ್ಸ್ ವತಿಯಿಂದ ಪ್ರೆಸೆಂಟ್ ಮಾಡಿದ್ದರು. ಈ ಚಿತ್ರಕ್ಕೆ ಪ್ರೇಕ್ಷಕರು ಹಾಗೂ ವಿಮರ್ಷಕರ ವಲಯದಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಮೊದಲ ಹೆಜ್ಜೆಯಲ್ಲಿಯೇ ನಿರ್ದೇಶಕರಾಗಿ ಶಶಾಂಕ್ ಭರವಸೆ ಮೂಡಿಸಿದ್ದರು. ಹೀಗಾಗಿ ಧನಂಜಯ್ ಅವರ ಜೊತೆ ಜಿಂಗೋಗಾಗಿ ಕೈ ಜೋಡಿಸಿದ್ದಾರೆ. ಇವರಿಬ್ಬರ ಕಾಂಬೋದ ಚಿತ್ರ ಯಾವ ರೀತಿ ಇರಲಿದೆ ಎಂಬ ನಿರೀಕ್ಷೆ ಹುಟ್ಟಿಸಿದೆ.
ಇದನ್ನೂ ಓದಿ : ನೇಪಾಳದಲ್ಲಿ ಭಾರೀ ದುರಂತ : ನದಿಗೆ ಉರುಳಿದ 40 ಪ್ರಯಾಣಿಕರಿದ್ದ ಭಾರತದ ಬಸ್ – 14 ಮಂದಿ ಸಾವು..!