ಬೆಂಗಳೂರು : ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಭೂಕುಸಿತದ ಭೀಕರತೆಗೆ ಸುಮಾರು 360ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 200ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಅವರಿಗಾಗಿ ಭಾರತೀಯ ಸೇನಾ ತಂಡ ಹುಡುಕಾಟ ಮುಂದುವರೆಸಿದ್ದಾರೆ. ಇದರ ನಡುವೆ ದುರಂತದಲ್ಲಿ ಸಿಕ್ಕಿ ನಲುಗಿ ಹೋಗಿರುವ ಜನರಿಗೆ ಕರ್ನಾಟಕ ಸರ್ಕಾರದಿಂದ 100 ಮನೆ ನಿರ್ಮಾಣ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ. ಇದೀಗ ರಾಜ್ಯ ಸರ್ಕಾರದ ಬೆನ್ನಲ್ಲೇ ಕೇರಳ ದುರಂತಕ್ಕೆ ಡಿಸಿಎಂ ಡಿಕೆಶಿ, ಸಚಿವ ರಾಮಲಿಂಗಾರೆಡ್ಡಿ ಸಹಾಯಹಸ್ತ ನೀಡಿದ್ದಾರೆ.
ಕೇರಳ ದುರಂತಕ್ಕೆ ಮಿಡಿದ ಕಾಂಗ್ರೆಸ್ ಮುಖಂಡರು, ಇವತ್ತು 1 ಕೋಟಿ 35 ಲಕ್ಷದ ಸಾಮಗ್ರಿ ಸಂಗ್ರಹಿಸಿ ಕಳುಹಿಸಿ ಕೊಟ್ಟಿದ್ದಾರೆ. ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ದವಸ, ಧಾನ್ಯ, ಬಟ್ಟೆ ಮತ್ತಿತರ ನೆರವು ಸಾಮಗ್ರಿ ಸಂಗ್ರಹಿಸಿದ್ದು, ಕೇರಳಕ್ಕೆ 10ಕ್ಕೂ ಹೆಚ್ಚು ಟ್ರಕ್ಗಳಲ್ಲಿ ಪರಿಹಾರ ಸಾಮಗ್ರಿ ರವಾನೆಯಾಗುತ್ತಿದೆ. ಈಗಾಗಲೇ ಡಿಸಿಎಂ ಡಿಕೆಶಿ ಕೇರಳಕ್ಕೆ ತೆರಳಿದ ಪರಿಹಾರ ಸಾಮಗ್ರಿ ಟ್ರಕ್ಗೆ ಚಾಲನೆ ನೀಡಿದ್ದಾರೆ.
ಪರಿಹಾರ ಸಾಮಗ್ರಿ ಟ್ರಕ್ಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ವಯನಾಡಿನಲ್ಲಿ ಊರಿಗೆ ಊರೇ ಕೊಚ್ಚಿ ಹೋಗಿವೆ. ರಾಹುಲ್ ಗಾಂಧಿ, ಪ್ರಿಯಾಂಕಾಗಾಂಧಿ, ವೇಣುಗೋಪಾಲ್ ಭೇಟಿ ನೀಡಿದ್ರು. ನಾವು ಕೈಲಾದಷ್ಟೂ ಅಲ್ಲಿನ ಜನರಿಗೆ ಸಹಾಯ ಮಾಡುತ್ತಿದ್ದೇವೆ ಎಂದಿದ್ದಾರೆ.
ಇನ್ನು BTM ಲೇಔಟ್ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಸಹಾಯ ಚಾಚಿದ್ದಾರೆ. ರೆಡ್ಡಿ ಜನಾಂಗದವರು ಸಂಕಷ್ಟದಲ್ಲಿ ಸಂತ್ರಸ್ತರಿಗೆ ಸಹಾಯಹಸ್ತ ನೀಡಿದ್ದಾರೆ. ರಾಮಲಿಂಗಾರೆಡ್ಡಿಗೆ ಸರ್ಕಾರದ ಪರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಬಾಂಗ್ಲಾ ಕ್ಷಿಪ್ರಕ್ರಾಂತಿ – ಹಿಂದೂ ದೇಗುಲ, ಸಮುದಾಯಭವನಗಳ ಮೇಲೆ ಪುಂಡರ ದಾಳಿ..!