ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ನಟ ದರ್ಶನ್ಗೆ ಜೈಲೂಟ ಒಗ್ಗುತ್ತಿಲ್ಲ. ಹೀಗಾಗಿ ಮನೆಯೂಟಕ್ಕಾಗಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ವಿಚಾರಣೆ ನಡೆಸಿದ ಕೋರ್ಟ್ ದರ್ಶನ್ ಮನೆ ಊಟದ ಅರ್ಜಿಯನ್ನು ಮತ್ತೆ ಮುಂದೂಡಿಕೆ ಮಾಡಿದೆ. ಇದ್ದರಿಂದ ಇನ್ನೂ 15 ದಿನ ದರ್ಶನ್ಗೆ ಜೈಲು ಮುದ್ದೆಯೇ ಗತಿಯಾಗಿದೆ.
ನಟ ದರ್ಶನ್ ಮನೆ ಊಟದ ರಿಟ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ನ ಏಕಸದಸ್ಯ ಪೀಠ ನಡೆಸಿತು. ಕಳೆದ ಬಾರಿ ರಿಟ್ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಈ ಬಗ್ಗೆ ನಿರ್ಣಯ ಕೈಗೊಂಡು ವರದಿ ಸಲ್ಲಿಸುವಂತೆ ಸೂಚಿಸಿದ್ದರು.
ಇಂದು ದರ್ಶನ್ಗೆ ಮನೆ ಊಟ ಅಗತ್ಯ ಇಲ್ಲ ಎಂದು ಮಾಲಿನಿ ಕೃಷ್ಣಮೂರ್ತಿ ರಿಪೋರ್ಟ್ ಸಲ್ಲಿಸಿದ್ದರು. ಇದೀಗ ಜೈಲು ಅಧಿಕಾರಿಗಳ ವರದಿ ಸ್ವೀಕರಿಸಿದ ಹೈಕೋರ್ಟ್ ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಿಕೆ ಮಾಡಿದೆ.
ಜೈಲು ಅಧಿಕಾರಿಗಳು ಸಲ್ಲಿಸಿದ ರಿಪೋರ್ಟ್ : ರಾಜ್ಯದ ಎಲ್ಲಾ ಕಾರಾಗೃಹಗಳಲ್ಲಿ, ಬೆಂಗಳೂರು ಕೇಂದ್ರ ಕಾರಾಗೃಹವನ್ನು ಒಳಗೊಂಡಂತೆ ಎಲ್ಲಾ ಬಂಧಿಗಳಿಗೆ ಸಮತೋಲನವಾದ ಪೌಷ್ಠಿಕಾಂಶಯುಕ್ತ ಆಹಾರವನ್ನು ನೀಡಲಾಗುತ್ತಿರುತ್ತದೆ. ಇದಲ್ಲದೆ, ಬಂಧಿಗೆ ಬೆಂಗಳೂರು ಕೇಂದ್ರ ಕಾರಾಗೃಹದ ವೈದ್ಯಾಧಿಕಾರಿಗಳ ಸಲಹೆ ಮೇರೆಗೆ 04.07.2024 ರಿಂದ 10 ದಿನಗಳ ಕಾಲ ಹಾಲು, ಮೊಟ್ಟೆ ಮತ್ತು ಬ್ರೆಡ್ ಹಾಗೂ ಕ್ಯಾಲ್ಸಿಯಂ, ವಿಟಾಮಿನ್-ಡಿ3 ಸಪ್ಲಿಮೆಂಟ್ಗಳನ್ನು ನೀಡಲಾಗಿರುತ್ತದೆ.
ನಂತರ ವೈದ್ಯಾಧಿಕಾರಿಗಳ ಮುಂದುವರೆದ ಸಲಹೆ ಮೇರೆಗೆ 01.08.2024 ರಿಂದ 15 ದಿನಗಳವರೆಗೆ ಬ್ರೆಡ್, ಹಾಲು ಮತ್ತು ಮೊಟ್ಟೆಯನ್ನು ನೀಡಲಾಗುತ್ತಿರುತ್ತದೆ. ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆ ಕೈಪಿಡಿ-2021 ಕಂಡಿಕೆ-728(1) ರನ್ವಯ ಸದರಿ ಬಂದಿಯು ಕೊಲೆಯ ಆರೋಪಿಯಾಗಿದ್ದು, ಆತನ ಮನವಿಯನ್ನು ಪುರಸ್ಕರಿಸಲು ಅವಕಾಶವಿರುವುದಿಲ್ಲ. ಆದರಿಂದ ಮನೆಯ ಊಟವನ್ನು ಕೋರಿ ಸಲ್ಲಿಸಿರುವ ಮನವಿಯನ್ನು ತಿರಸ್ಕರಿಸಿದೆ ಎಂದು ಕಾರಾಗೃಹ ಎಡಿಜಿಪಿ ಮಾಲಿನಿ ಕೃಷ್ಣ ಮೂರ್ತಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : ರಾಜ್ಯಪಾಲರು ಬಿಜೆಪಿ ಅಧ್ಯಕ್ಷರಂತೆ ಕೆಲಸ ಮಾಡ್ತಿದ್ದಾರೆ – ಬಿ.ಕೆ ಹರಿಪ್ರಸಾದ್..!