ಬೆಂಗಳೂರು : ತಮಿಳುನಾಡು ಕರಾವಳಿ ಪ್ರದೇಶಗಳಲ್ಲಿ ‘ಫೆಂಗಲ್’ ಚಂಡಮಾರುತದ ಪರಿಣಾಮ ಗೋಚರಿಸಲಾರಂಭಿಸಿದೆ. ಹವಾಮಾನ ಇಲಾಖೆ ಪ್ರಕಾರ ಫೆಂಗಲ್ ಚಂಡಮಾರುತ ಇಂದು ಸಂಜೆ ವೇಳೆಗೆ ಪುದುಚೇರಿಯ ಕರಾವಳಿ ಪ್ರದೇಶಗಳಿಗೆ ಅಪ್ಪಳಿಸಲಿದೆ. ಪರಿಣಾದ ಈಗಾಗಲೇ ಕರಾವಳಿ ಭಾಗದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಜನರು ಆತಂಕದಲ್ಲಿದ್ದಾರೆ.
ಇಂದು ಸಂಜೆ ವೇಳೆಗೆ ಫೆಂಗಲ್ ಚಂಡಮಾರುತ ಅಪ್ಪಳಿಸುವ ಸಮಯದಲ್ಲಿ ಗಾಳಿಯ ವೇಗ ಗಂಟೆಗೆ 90 ಕಿಲೋಮೀಟರ್ ಆಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದಾಗಿ ಉತ್ತರ ತಮಿಳುನಾಡು ಮತ್ತು ಪುದುಚೇರಿಯ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಸದ್ಯ ಫೆಂಗಲ್ ಚಂಡಮಾರುತದಿಂದಾಗಿ ಪುದುಚೇರಿಯ ಕರಾವಳಿ ಪ್ರದೇಶಗಳಲ್ಲಿ ಹವಾಮಾನದಲ್ಲಿ ಭಾರೀ ಬದಲಾವಣೆ ಕಂಡುಬರುತ್ತಿದೆ. ಪುದುಚೇರಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಸಮುದ್ರದ ಅಲೆಗಳ ಅಬ್ಬರ ನಿಮಷ ನಿಮಷಕ್ಕೂ ಹೆಚ್ಚಾಗುತ್ತಿದೆ.
ಹವಾಮಾನ ಇಲಾಖೆಯ ಪ್ರಕಾರ, ಫೆಂಗಲ್ ಚಂಡಮಾರುತ ಚೆನ್ನೈನಿಂದ ಆಗ್ನೇಯಕ್ಕೆ 210 ಕಿಲೋಮೀಟರ್ ದೂರದಲ್ಲಿದ್ದು, ಇದು ಪ್ರಸ್ತುತ ಪಶ್ಚಿಮ-ವಾಯವ್ಯದ ಕಡೆಗೆ ಚಲಿಸುತ್ತಿದೆ. ನಂತರ ಉತ್ತರ ತಮಿಳುನಾಡು-ಪುದುಚೇರಿಯ ಕರಾವಳಿ ಪ್ರದೇಶಗಳನ್ನು ದಾಟಿ ಕಾರೈಕಲ್ ಮತ್ತು ಪುದುಚೇರಿ ಬಳಿಯ ಮಹಾಬಲಿಪುರಂ ಕಡೆಗೆ ಫೆಂಗಲ್ ಚಲಿಸಲಿದೆ.
ಚಂಡಮಾರುತದಿಂದಾಗಿ ತಮಿಳುನಾಡು ಸರ್ಕಾರ ಜನರಿಗೆ ಮನೆ ಬಿಟ್ಟು ವಿನಾಕಾರಣ ಹೊರಬಾರದಂತೆ ಮನವಿ ಮಾಡಿದೆ. ಅಲ್ಲದೆ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ. ಜೊತೆಗೆ ಜನರನ್ನು ಮನೆಯಿಂದಲೇ ಕೆಲಸ ಮಾಡಲು ಅನುಮತಿಸುವಂತೆ ಐಟಿ ಕಂಪನಿಗಳಿಗೆ ಸೂಚನೆ ನೀಡಲಾಗಿದೆ. ಮಾತ್ರವಲ್ಲದೆ ಹಳೆ ಮಹಾಬಲಿಪುರಂ ಮತ್ತು ಕರಾವಳಿ ಮಾರ್ಗಗಳಲ್ಲಿ ಇಂದು ಸಾರಿಗೆ ಸೇವೆಗಳನ್ನು ಸರ್ಕಾರ ಸ್ಥಗಿತಗೊಳಿಸಿದೆ. ಫೆಂಗಲ್ ನೆರಳು ವಿಮಾನ ಹಾರಾಟದ ಮೇಲೂ ಬಿದ್ದಿದ್ದು, ತಿರುಚ್ಚಿ, ಕೊಯಮತ್ತೂರು, ಭುವನೇಶ್ವರ್, ಹೈದರಾಬಾದ್ ಮತ್ತು ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಂದ ಚೆನ್ನೈಗೆ ಸಂಪರ್ಕ ಕಲ್ಪಿಸುವ 13 ವಿಮಾನ ಹಾರಾಟ ರದ್ದುಗೊಳಿಸಲಾಗಿದೆ.
ಚಂಡಮಾರುತದ ದೃಷ್ಟಿಯಿಂದ ತಮಿಳುನಾಡಿನ ಚೆಂಗಲ್ಪಟ್ಟು, ಕಡಲೂರು, ವಿಲ್ಲುಪ್ರಂನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ಕಾಂಚೀಪುರಂ, ಅರಿಯಲೂರು, ತಂಜಾವೂರು, ತಿರುವರೂರ್, ಮೈಲಾಡುತುರೈ, ನಾಗಪಟ್ಟಣಂ, ಚೆನ್ನೈನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕರ್ನಾಟಕದ ಮೇಲೆ ಎಫೆಕ್ಟ್ : ನೆರೆ ರಾಜ್ಯದ ಚಂಡಮಾರುತದ ಪರಿಣಾಮ ಬೆಂಗಳೂರಲ್ಲಿ ಇಂದು ಬೆಳಗ್ಗೆಯಿಂದಲೇ ಭಾರೀ ಮೋಡ ಕವಿದ ವಾತಾವರಣ ಇದ್ದು, ಮಳೆಯಾಗುವ ಮುನ್ಸೂಚನೆ ಇದೆ. ಸದ್ಯ ಬೆಂಗಳೂರಲ್ಲಿ ಭಾರೀ ತಂಪಿನ ವಾತಾವರಣವಿದೆ. ಫೆಂಗಲ್ ಸೈಕ್ಲೋನ್ ಎಫೆಕ್ಟ್ನಿಂದ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ಮೂರ್ನಾಲ್ಕು ದಿನ ಗುಡುಗು ಸಹಿತ ಜೋರು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ : ಸಂಪುಟ ಸರ್ಜರಿ ಸದ್ಯಕ್ಕಿಲ್ಲ – ಹೈಕಮಾಂಡ್ ಭೇಟಿ ಬಳಿಕ ಸಿಎಂ, ಡಿಸಿಎಂ ಸ್ಪಷ್ಟನೆ..!