ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣದಲ್ಲಿ ಬಿಜೆಪಿ ಎಂಎಲ್ಸಿ ಸಿ.ಟಿ ರವಿ ಅವರನ್ನು ಪೊಲೀಸರು ಇಂದು ಬೆಳಗಾವಿ ಜೆಎಂಎಫ್ಸಿ ಕೋರ್ಟ್ಗೆ ಹಾಜರುಪಡಿಸಿದರು. ಸಿ.ಟಿ ರವಿ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸ್ಪರ್ಶಾ ಡಿಸೋಜಾ, ಜಾಮೀನು ಅರ್ಜಿ ವಿಚಾರಣೆಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದ್ದಾರೆ. ಸದ್ಯ ಭಾರೀ ಟೆನ್ಷನ್ನಲ್ಲಿರುವ ಬಿಜೆಪಿ ಎಂಎಲ್ಸಿ ಸಿ.ಟಿ ರವಿ ಅವರಿಗೆ ಬೆಳಗಾವಿ ಕೋರ್ಟ್ನಲ್ಲೇ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿದೆ.
ಜಡ್ಜ್ ಮುಂದೆ ಸಿ.ಟಿ ರವಿ ಗಂಭೀರ ಆರೋಪ : ಕೋರ್ಟ್ನಲ್ಲಿ ಜಡ್ಜ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿ.ಟಿ ರವಿ ಅವರು, ಲಕ್ಷ್ಮಿ ಹೆಬ್ಬಾಳ್ಕರ್, ಡಿ.ಕೆ ಶಿವಕುಮಾರ್ ಹಾಗೂ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕೌನ್ಸಿಲ್ ಹಾಲ್ ಒಳಗೆ ಡಿಕೆಶಿ, ಲಕ್ಷ್ಮಿ ಹೆಬ್ಬಾಳ್ಕರ್ ನಿನಗೊಂದು ಗತಿ ಕಾಣಿಸ್ತೀವಿ ಎಂದಿದ್ರು. ನಿನ್ನೆಯಿಂದ ಆಗ್ತಿರೋದನ್ನು ನೋಡಿದ್ರೆ ಷಡ್ಯಂತ್ರ ಕಾಣುತ್ತಿದೆ.
ಸುವರ್ಣ ಸೌಧದಲ್ಲೇ ನನ್ನನ್ನು ಪೊಲೀಸರು ವಶಕ್ಕೆ ಪಡೆದರು. ನಾನು ದೂರು ಕೊಟ್ಟರೂ FIR ದಾಖಲು ಮಾಡಿಲ್ಲ. ಕೇವಲ ಮಂತ್ರಿ ಕೊಟ್ಟ ದೂರಿನ ಮೇಲೆ ನನ್ನ ಅರೆಸ್ಟ್ ಮಾಡಿದ್ದಾರೆ. ರಾತ್ರಿಯಿಡೀ ನನ್ನನ್ನು 3 ಜಿಲ್ಲೆಗಳಲ್ಲಿ ಅಲೆದಾಡಿಸಿದರು. ಪೊಲೀಸರು ನನ್ನ ಮೊಬೈಲ್, ವಾಚ್ ಕಸಿದುಕೊಂಡರು. ವಿರೋಧ ಪಕ್ಷದ ನಾಯಕರು ಬಂದರೂ ಭೇಟಿಗೆ ಬಿಡಲಿಲ್ಲ.
ಜೀಪ್ನಲ್ಲಿ ಹೋಗುವಾಗ 10 ನಿಮಿಷಕ್ಕೊಮ್ಮೆ ಯಾರದ್ದೋ ಕರೆ ಬರ್ತಿತ್ತು. ಅವರು ಹೇಳಿದಂತೆ ನನ್ನನ್ನು ಎಲ್ಲೆಲ್ಲಿಗೋ ಕರೆದುಕೊಂಡು ಹೋಗ್ತಿದ್ದರು. ಖಾನಾಪುರ ಪೊಲೀಸ್ ಠಾಣೆ ಬಳಿ ನನ್ನ ತಲೆಗೆ ಗಾಯವಾಯ್ತು. ಯಾರು ಹೊಡೆದರು ಅಂತಾ ಗೊತ್ತಿಲ್ಲ, ಸೂಕ್ತ ಚಿಕಿತ್ಸೆ ಕೊಡಿಸಲಿಲ್ಲ. ರಾತ್ರಿಯಿಂದ ಊಟವಿಲ್ಲದೇ ನನ್ನನ್ನು ಅಲೆದಾಡಿಸಿದ್ದಾರೆ ಎಂದು ಜಡ್ಜ್ ಮುಂದೆ ಎಂಎಲ್ಸಿ ಸಿ.ಟಿ.ರವಿ ಗಂಭೀರ ಆರೋಪ ಮಾಡಿದ್ದಾರೆ.
ಜಾಮೀನಿಗೆ ಸಿ.ಟಿ ರವಿ ಪರ ವಕೀಲರು ಮುಂದಿಟ್ಟ ಅಂಶವೇನು? ಆರೋಪಿ ಜಾಮೀನುರಹಿತ ಪ್ರಕರಣದಲ್ಲಿ ಬಂಧನಕ್ಕೊಳಗಾದಾಗ ಸೆಕ್ಷನ್ 480ಅಡಿ ಜಾಮೀನಿಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ರವಿ ಸಾಮಾನ್ಯ ವ್ಯಕ್ತಿಯಲ್ಲ. ಅವರು ರೌಡಿಯೂ ಅಲ್ಲ. ಘಟನೆ ನಡೆದಿದ್ದು ಸುವರ್ಣ ವಿಧಾನ ಸೌಧದಲ್ಲಿ. ಅವರ ಬಂಧನಕ್ಕೆ ಸಭಾಪತಿ ಅನುಮತಿ ಅಗತ್ಯ ಇದೆ. ಪೊಲಿಸರು ಯಾವುದೇ ಪ್ರಕ್ರಿಯೆಗಳನ್ನು ಸರಿಯಾಗಿ ಮಾಡಿಲ್ಲ ಎಂದು ವಕೀಲರು ವಾದ ಮಂಡಿಸಿದ್ದಾರೆ.
ಇದನ್ನೂ ಓದಿ : ಸಿ.ಟಿ ರವಿ ಜಾಮೀನು ಆದೇಶ ಕಾಯ್ದಿರಿಸಿದ ನ್ಯಾಯಾಲಯ – ವಿಚಾರಣೆ ಮಧ್ಯಾಹ್ನ 3ಕ್ಕೆ ಮುಂದೂಡಿಕೆ..!