ಬೆಂಗಳೂರು : ಸುವರ್ಣಸೌಧದಲ್ಲಿ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಶಬ್ದಗಳಿಂದ ಬಿಜೆಪಿ ನಾಯಕ ಸಿ.ಟಿ ರವಿ ನಿಂದಿಸಿದ ಆರೋಪ ವ್ಯಾಪಕವಾಗಿ ಸದ್ದು ಮಾಡುತ್ತಿದೆ. ಈ ನಡುವೆ ಸಿ.ಟಿ ರವಿ ಆ ಪದ ಬಳಸಿದ್ದಾರೆ ಎನ್ನಲಾದ ವೀಡಿಯೋವೊಂದನ್ನ ಲಕ್ಷ್ಮಿ ಹೆಬ್ಬಾಳ್ಕರ್ ರಿಲೀಸ್ ಮಾಡಿದ್ದಾರೆ. ಈ ಸಂಬಂಧ ಸಭಾಪತಿ ಬಸವರಾಜ್ ಹೊರಟ್ಟಿ ಪ್ರತಿಕ್ರಿಯಿಸಿ, ಸಿ.ಟಿ ರವಿ ಹೇಳಿಕೆ ಪರಿಷತ್ನಲ್ಲಿ ರೆಕಾರ್ಡ್ ಆಗಿಲ್ಲ. ವೈರಲ್ ವಿಡಿಯೋ ಅಸಲಿಯೋ.. ನಕಲಿಯೋ ಗೊತ್ತಿಲ್ಲ ಎಂದಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಬಸವರಾಜ್ ಹೊರಟ್ಟಿ ಮಾತನಾಡಿ, ಫೇಕ್ ವಿಡಿಯೋ ಇದ್ದರೂ ಇರಬಹುದು. ವಿಧಾನ ಪರಿಷತ್ ವಿಡಿಯೋ, ಆಡಿಯೋ ಮಾತ್ರ ಅಧಿಕೃತ, ನಮ್ಮಲ್ಲಿದ್ದ ವಿಡಿಯೋ ಮಾತ್ರ ನಮಗೆ ಅಥೆಂಟಿಕ್. ಒಂದು ವೇಳೆ ವಿಡಿಯೋ ಇದ್ದರೆ ನನಗೆ ದೂರು ಕೊಡಲಿ, ವಿಡಿಯೋವನ್ನು FSLಗೆ ಕಳಿಸಿ ಪರಿಶೀಲನೆ ಮಾಡಿಸುತ್ತೇವೆ. ಆನಂತರ ಏನ್ ತೀರ್ಮಾನ ಮಾಡಬೇಕೋ ಮಾಡ್ತೇವೆ, ಮಹಿಳಾ ಆಯೋಗ ಸಭಾಪತಿಗೆ ಕೇಳುವ ಅಧಿಕಾರ ಹೊಂದಿಲ್ಲ. ಅವರ ಪತ್ರ ಬರೆದರೆ ಏನ್ ಉತ್ತರ ಕೊಡಬೇಕೋ ಕೊಡ್ತೀನಿ, ಸಿ.ಟಿ.ರವಿ-ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕರಣ ಮುಗಿದ ಅಧ್ಯಾಯ. ಈಗಾಗಲೇ ನಾನು ನನ್ನ ರೂಲಿಂಗ್ ಕೊಟ್ಟಾಗಿದೆ ಎಂದಿದ್ದಾರೆ.
ಇನ್ನು ಸದನದೊಳಗೆ ಪೊಲೀಸರಿಗೆ ಎಂಟ್ರಿ ಕೊಡಲ್ಲ ಎಂದ ಹೊರಟ್ಟಿ, ಪೊಲೀಸರು ಮಹಜರಿಗೆ ಅನುಮತಿ ಕೇಳಿ ಬಂದಿದ್ದರು. ನಾನು ಮಹಜರಿಗೆ ಅವಕಾಶವನ್ನು ಕೊಟ್ಟಿಲ್ಲ, ಸದನ ಒಳಗೆ ಏನೇ ನಡೆದಿದ್ದರೂ ಅದು ನಮ್ಮ ವ್ಯಾಪ್ತಿಗೆ ಬರುತ್ತೆ. ಮಧ್ಯಾಹ್ನ 1 ಗಂಟೆಗೆ ಸದನದ ಒಳಗೆ ಆಗಿದೆ ಅಂತಾ FIRನಲ್ಲಿತ್ತು, ಇದು ತಪ್ಪು, ಸದನ ನಡೆಯುವಾಗ ಆಗಿಲ್ಲ ಅಂತಾ ಹೇಳಿದ್ದೇನೆ. ಪೊಲೀಸರು ಅದನ್ನು ತಿದ್ದಿಕೊಳ್ಳೋದಾಗಿ ತಿಳಿಸಿದ್ದಾರೆ, ಇದು ಸದನ ಕಲಾಪದ ಹೊರಗೆ ನಡೆದಿರುವ ವಿಚಾರ. ಬೈದಾಡಿಕೊಂಡಿರೋ ಬಗ್ಗೆ ನನಗೆ ಯಾರೂ ದೂರು ನೀಡಿಲ್ಲ, ನನ್ನ ಹಕ್ಕು ಚ್ಯುತಿ ಆಗಿದೆ ಅಂತಾ ದೂರು ಬಂದ್ರೆ ಪರಿಶೀಲಿಸುತ್ತೇನೆ ಎಂದಿದ್ದಾರೆ.
ಅಂದು ಬೆಳಗಿನ ಜಾವದವರೆಗೂ ನಾನು ಟ್ರ್ಯಾಕ್ ಮಾಡಿದ್ದೆ, ಸಿ.ಟಿ.ರವಿ ಜೊತೆಯೂ ಫೋನ್ನಲ್ಲಿ ನಾನು ಮಾತನಾಡಿದ್ದೆ. ಪೊಲೀಸರಿಗೂ ಅವರ ರಕ್ಷಣೆ ಬಗ್ಗೆ ಸೂಚನೆಯನ್ನು ನೀಡಿದ್ದೆ, ಅವರು ನಮ್ಮ ಮನೆ ಸದಸ್ಯ, ಹೆಚ್ಚು ಕಡಿಮೆಯಾದ್ರೆ ಸುಮ್ಮನಿರಲ್ಲ. ಬೆಳಗಾವಿ ಎಸ್ಪಿಗೆ ಫೋನ್ನಲ್ಲೇ ಎಚ್ಚರಿಕೆ ನೀಡಿದ್ದೆ ಎಂದು ಹೊರಟ್ಟಿ ಹೇಳಿದ್ದಾರೆ.
ಇದನ್ನೂ ಓದಿ : ವಿವಾಹಿತ ಮಹಿಳೆಯರ ಖಾತೆಗೆ ಹಣ – ಬಾಲಿವುಡ್ ನಟಿ ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ..!