ಬೆಂಗಳೂರು : ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ರಾಜ್ಯಕ್ಕೆ ಬಿಜೆಪಿ ಹೈಕಮಾಂಡ್ ನಾಯಕರ ಭೇಟಿ ಜೋರಾಗಿದೆ. ಇಂದು ಪ್ರಧಾನಿ ಮೋದಿ ಮತ್ತೆ ಕರುನಾಡಿನ ಪ್ರವಾಸ ಕೈಗೊಂಡಿದ್ದಾರೆ. ಈ ಬಾರಿ ಬೆಂಗಳೂರಿನ ಕ್ಷೇತ್ರಗಳನ್ನೇ ಟಾರ್ಗೆಟ್ ಮಾಡಿ ನಮೋ ಮತಬೇಟೆಗೆ ಧುಮಕಿದ್ದಾರೆ. ಇದರ ನಡುವೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯಕ್ಕೆ ಅನ್ಯಾಯವೆಸಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ನಗರದ ಮೇಖ್ರಿ ಸರ್ಕಲ್ ಬಳಿ ಚೊಂಬು ಹಿಡಿದು ಪ್ರತಿಟನೆ ನಡೆಸಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಬೆಂಗಳೂರಿನ ಮೇಖ್ರಿ ಸರ್ಕಲ್ನಲ್ಲಿ ಕಾಂಗ್ರೆಸ್ ನಾಯಕರು ಚೊಂಬಿನ ಸಮೇತ ಪ್ರತಿಭಟನೆ ನಡೆಸಿದ್ದಾರೆ.
ಇದೆ ವೇಳೆ ಮಾತನಾಡಿದ ರಣದೀಪ್ ಸುರ್ಜೆವಾಲಾ ಅವರು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಕರ್ನಾಟಕ ತನ್ನ ಪಾಲು ಕೇಳಿದ್ರೆ ಮೋದಿ ಸರ್ಕಾರ ಚೊಂಬು ಕೊಡ್ತಾ ಇದೆ. ಕನ್ನಡಿಗರು ತಮ್ಮ ಪಾಲಿನ ತೆರಿಗೆ ಕೇಳೋದೇ ತಪ್ಪಾ? 6 ತಿಂಗಳಿಂದಲೂ 17,400 ಕೋಟಿ ಹಣ ಬರ ಪರಿಹಾರ ಬಾಕಿ ಉಳಿಸಿಕೊಂಡಿದ್ದಾರೆ. 15ನೇ ಹಣಕಾಸು ಆಯೋಗದ ಹಂಚಿಕೆಯಲ್ಲೂ ಅನ್ಯಾಯ ಆಗಿದೆ. ಭದ್ರಾ ಯೋಜನೆಗೆ ಹಣ ಬಿಡುಗಡೆ ಮಾಡಿಲ್ಲ”ಎಂದು ಗುಡುಗಿದ್ದಾರೆ.
ಮೇಕೆದಾಟು ಯೋಜನೆ ಸೇರಿ ಕರ್ನಾಟಕದ ಯೋಜನೆಗಳಿಗೆ ಅನುಮತಿ ಕೊಟ್ಟಿಲ್ಲ. ಇದೆಲ್ಲಾ ಕೇಳಿದ್ರೆ ಕೇಂದ್ರ ಸರ್ಕಾರ ಚೊಂಬು ಕೊಡುವ ಕೆಲಸ ಮಾಡ್ತಿದೆ ಎಂದು ಚೊಂಬು ಎತ್ತಿ ಹಿಡಿದು ಕೇಂದ್ರದ ವಿರುದ್ಧ ರಣದೀಪ್ ಸುರ್ಜೆವಾಲಾ ವಾಗ್ದಾಳಿ ನಡೆಸಿದ್ದಾರೆ.
ಪ್ರತಿಭಟನೆ ವೇಳೆ ಸುರ್ಜೆವಾಲಾಗೆ ರಾಜ್ಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಾಥ್ ನೀಡಿದ್ದಾರೆ. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಸಿಲಿಕಾನ್ ಸಿಟಿಯಲ್ಲಿ ಗ್ಯಾಂಗ್ನಿಂದ ರೌಡಿಶೀಟರ್ ಮೇಲೆ ಡೆಡ್ಲಿ ಅಟ್ಯಾಕ್ - ದೃಶ್ಯ ಸಿಸಿಟಿವಿಯಲ್ಲಿ ಸೆರೆ..!