ಜೀ ಕನ್ನಡ ವಾಹಿನಿಯಲ್ಲಿ ಕಳೆದ ಆರು ತಿಂಗಳಿಂದ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರ ಕಾಣುತ್ತಿರುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಇದೀಗ ಕೊನೇ ಹಂತಕ್ಕೆ ಬಂದಿದೆ. ಕಿರುತೆರೆ ಪ್ರೇಕ್ಷಕನಿಗೆ ನಗುವಿನ ಹೂರಣವನ್ನೇ ಬಡಿಸಿದ ಈ ಶೋ, ಈ ಸಲ ಹೊಸ ರೂಪದಲ್ಲಿ ನೋಡುಗರ ಮನರಂಜಿಸಿತ್ತು. ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9 ರಿಂದ 11 ಗಂಟೆಯವರೆಗೆ ‘ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್’ ಶೋ ನ ಗ್ರಾಂಡ್ ಫಿನಾಲೆ ಅದ್ದೂರಿಯಾಗಿ ನಡೆಯಲಿದೆ.
25 ವಾರಗಳ ಕಾಲ ಕಾಮಿಡಿ ನಗೆ ಹಂಚಿರುವ ಈ 5 ತಂಡಗಳು ಫಿನಾಲೆ ವೇದಿಕೆಯಲ್ಲಿ ಮತ್ತಷ್ಟು ಮನರಂಜನೆಯನ್ನ ನೀಡಲಿದ್ದಾರೆ. ಜೊತೆಗೆ ಜೂನಿಯರ್ ಅಮಿತಾಬ್ ಬಚ್ಚನ್ ಕೂಡ ಈ ವೇದಿಕೆಯಲ್ಲಿ ಇರಲಿದ್ದಾರೆ. ನವರಸ ನಾಯಕ ಜಗ್ಗೇಶ್, ಅನುಶ್ರೀ, ಕುರಿ ಪ್ರತಾಪ್, ಮಾಸ್ಟರ್ ಆನಂದ್, ಅಕುಲ್ ಬಾಲಾಜಿ, ಶ್ವೇತಾ ಚಂಗಪ್ಪ ಸಮ್ಮುಖದಲ್ಲಿ ಈ ಫಿನಾಲೆ ನಡೆಯಲಿದ್ದು, ‘ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್’ ನ ಕಿರೀಟ ಯಾರ ಪಾಲಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಪ್ರತಿ ವರ್ಷ ಇಂತಿಷ್ಟು ಜನ ಕಾಮಿಡಿಯನ್‌ಗಳನ್ನು ಆಯ್ದುಕೊಂಡು, ಅವರಿಂದ ಬಗೆಬಗೆ ಸ್ಕೀಟ್‌ಗಳನ್ನ ಮಾಡಿಸಲಾಗುತ್ತಿತ್ತು. ಆ ಪೈಕಿ ಕೊನೆಗೆ ಒಬ್ಬ ವಿನ್ನರ್‌ಗೆ ನಗದು ಬಹುಮಾನದ ಜತೆಗೆ ಟ್ರೋಫಿ ನೀಡಲಾಗುತ್ತಿತ್ತು. ಆದರೆ, ಈ ಸಲದ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ನಲ್ಲಿ ಜೀ ಕನ್ನಡದ ಎಲ್ಲ ನಿರೂಪಕರನ್ನು ಒಂದೆಡೆ ಸೇರಿಸಿ, ತೀರ್ಪುಗಾರರ ಸ್ಥಾನ ಕೊಡಲಾಗಿತ್ತು. ಈಗ ಫಿನಾಲೆ ವೇದಿಕೆ ಮೇಲೆ ಐದು ತಂಡಗಳ ಭರ್ಜರಿಯಾಗಿಯೇ ಫರ್ಫಾರ್ಮ್ ಮಾಡಿವೆ.
ಒಟ್ಟಾರೆ ಕಳೆದ 25 ವಾರಗಳಿಂದ ಹಾಸ್ಯದ ಹೊನಲನು ಹರಿಸಿದ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ನ ವಿಜೇತರು ಯಾರು? ಎಂಬ ಈ ಕುತುಹಲ ತಣಿಯಲು ಭಾನುವಾರದವರೆಗೂ ಕಾಯಲೇಬೇಕು.
ಇದನ್ನೂ ಓದಿ : ಬೆಂಗಳೂರು : PG ಕಟ್ಟಡದ ಮೇಲಿಂದ ಹಾರಿ ಯುವಕ ಆತ್ಮಹತ್ಯೆ – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ..!