ಕಲಬುರಗಿ : 10 ವರ್ಷಗಳ ಬಳಿಕ ಇಂದು ಕಲಬುರಗಿಯಲ್ಲಿ ಸಂಪುಟ ಸಭೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ 2ನೇ ಸಂಪುಟ ಸಭೆಯನ್ನು ಕಲಬುರಗಿಯಲ್ಲಿ ಮಾಡ್ತಿದ್ದಾರೆ. ಹೈದರಾಬಾದ್ ವಿಮೋಚನಾ ದಿನದಂದೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಪುಟ ಸಭೆಗೆ ಭರ್ಜರಿ ತಯಾರಿ ನಡೆದಿದೆ.
ನಿನ್ನೆಯೇ ಸಿಎಂ ಸಿದ್ದರಾಮಯ್ಯ ಕಲಬುರಗಿಗೆ ಭೇಟಿ ನೀಡಿದ್ದು, ಎರಡು ದಿನಗಳ ಕಾಲ ಕಲಬುರಗಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮುಡಾ ಟೆನ್ಷನ್ ನಡುವೆ ಕಲಬುರಗಿಯಲ್ಲಿ ಸಿಎಂ ವಾಸ್ತವ್ಯ ಹೂಡಲಿದ್ದು, ನಿನ್ನೆ ಅಫಜಲಪುರ ಕ್ಷೇತ್ರದ ಕವಲಗಾ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನ ಸಿಎಂ ಅನಾವರಣ ಮಾಡಿದ್ದಾರೆ.
ಇಂದು ಸಿಎಂ ಸಿದ್ದರಾಮಯ್ಯ ಅವರು ಪೋಲೀಸ್ ಪರೇಡ್ ಮೈದಾನದಲ್ಲಿ ಬೆಳಿಗ್ಗೆ 9ಕ್ಕೆ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನದ ಧ್ವಜಾರೋಹಣ ಮಾಡಲಿದ್ದು, SVP ಚೌಕ್ ನಲ್ಲಿ ಸರ್ದಾರ್ ಪಟೇಲ್ ಮೂರ್ತಿಗೆ ಮಾಲಾರ್ಪಣೆಯನ್ನು ಮಾಡಲಿದ್ದಾರೆ. ಸಂಜೆ 4 ಗಂಟೆಗೆ RC ಕಚೇರಿ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆ ಜರುಗಲಿದೆ.
1982ರಲ್ಲಿ ಗುಂಡೂರಾವ್ ಅವರು ಕಲಬುರಗಿಯಲ್ಲಿ ಮೊದಲ ಸಂಪುಟ ಸಭೆ ನಡೆಸಿದ್ದರು. 2014ರಲ್ಲಿ ಸಿದ್ದರಾಮಯ್ಯನವರೂ ಸಂಪುಟ ಸಭೆ ಮಾಡಿದ್ದರು. ಇದೀಗ ಎರಡನೇ ಬಾರಿ ಕಲಬುರಗಿಯಲ್ಲೇ ಇಂದು ಕ್ಯಾಬಿನೆಟ್ ಮೀಟಿಂಗ್ ನಡೆಯಲಿದೆ. ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ ಜನರ ನಿರೀಕ್ಷೆಗಳನ್ನು ಸಂಪುಟ ಸಭೆ ಹೆಚ್ಚಿಸಿದೆ. ಮುಖ್ಯಕಾರ್ಯದರ್ಶಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳಿಗೆ ಶಿಷ್ಟಾಚಾರದ ಅಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ : ಕೋಲಾರದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗುಂಪು ಘರ್ಷಣೆ – ನಾಲ್ವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ..!