ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ನಿವೇಶನಗಳನ್ನು ವಾಪಸ್ ನೀಡಿದರೂ ಸಹ EDಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬೆಳವಣಿಗೆ ಬಳಿಕ ಸಚಿವರ ಸರಣಿ ಸಭೆ, ಹೇಳಿಕೆಗಳು, ಮುಖ್ಯಮಂತ್ರಿ ಬದಲಾವಣೆ ವಿಚಾರದ ಕುರಿತು ಚರ್ಚೆಗಳು ನಡೆಯುತ್ತಿವೆ. ಇಂತಹ ಹೊತ್ತಲ್ಲೇ ಹೈಕಮಾಂಡ್ ನಾಯಕರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕುರಿತು ರಾಜ್ಯದಲ್ಲಿ ಬಹಿರಂಗವಾಗಿಯೇ ಚರ್ಚೆಗಳು ನಡೆಯುತ್ತಿರುವಾಗ ಹೈಕಮಾಂಡ್ ನಾಯಕರ ಭೇಟಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಅವರು, ಸೆಂಟ್ರಲ್ ಪಬ್ಲಿಕ್ ಕಮಿಟಿ ಮೀಟಿಂಗ್ ಹಿನ್ನೆಲೆ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ವೇಳೆಯೇ ಸಿಎಂ ಹಾಗೂ ರಾಜ್ಯದ ನಾಯಕರ ಜೊತೆ ಕೆ. ಸಿ. ವೇಣುಗೋಪಾಲ್ ಚರ್ಚಿಸಲಿದ್ದು, ಸಿಎಂ ರಾಜೀನಾಮೆ ಚರ್ಚೆ, ರಾಜಕೀಯ ಚಟುವಟಿಕೆ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ. ಇನ್ನು ಸಚಿವರು, ಶಾಸಕರ ರಹಸ್ಯ ಸಭೆಗಳ ಬಗ್ಗೆ ಹೈಕಮಾಂಡ್ ಗರಂ ಆಗಿದ್ದು, ಸಿಎಂ ಬದಲಾವಣೆಯ ಚರ್ಚೆ ಮಾಡುತ್ತಿರುವ ಸಚಿವರು, ಶಾಸಕರು, ಮುಖಂಡರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ವಾರ್ನಿಂಗ್ ಕೊಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ : ಉದ್ಯಮಿಗೆ 50 ಕೋಟಿ ರೂ. ನೀಡುವಂತೆ ಬೆದರಿಕೆ ಪ್ರಕರಣ – FIR ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಹೆಚ್‌ಡಿಕೆ..!