ಇತ್ತೀಚಿಗೆ ಶುಲ್ಕ ಪಾವತಿಸಿಲ್ಲ ಎಂದು ಶಾಲಾಡಳಿತ ಮಕ್ಕಳನ್ನು ಕೋಣೆಯಲ್ಲಿ ಕೂಡಿ ಹಾಕಿರುವ ಘಟನೆ ನಡೆದಿತ್ತು. ಆದರೆ ಇಲ್ಲೊಂದು ಕಡೆ ಪೋಷಕರು ಶಾಲಾ ಶುಲ್ಕ ಪಾವತಿಸಿಲ್ಲ ಎಂದು ಸ್ಕೂಲ್ ಮ್ಯಾನೇಜರ್ ಒಬ್ಬ ವಿದ್ಯಾರ್ಥಿಗಳನ್ನು ಶಾಲೆಯ ಗೇಟ್‌ನಿಂದ ಹೊರ ಹಾಕಿ ಬಿಸಿಲಲ್ಲಿ ಕೂರಿಸಿರುವ ಅಮಾನವೀಯ ಘಟನೆಯೊಂದು ನಡೆದಿದೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಮ್ಯಾನೇಜರ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಶಾಲಾ ಶುಲ್ಕ ಪಾವತಿಸಿಲ್ಲ ಎಂದು ಸ್ಕೂಲ್ ಮ್ಯಾನೇಜರ್ ಸುಮಾರು 100 ಮುಗ್ಧ ವಿದ್ಯಾರ್ಥಿಗಳನ್ನು ಗೇಟ್ ಒಳಗೆ ಬರಲು ಬಿಡದೆ ಬಿಸಿಲಲ್ಲಿ ಕೂರಿಸಿದ್ದಾನೆ. ಅಷ್ಟೇ ಅಲ್ಲದೆ ವಿಡಿಯೋ ಮಾಡುವ ಮೂಲಕ ಶುಲ್ಕ ಕಟ್ಟುವಂತೆ ಒತ್ತಡ ಹೇರಿ ಮಕ್ಕಳಿಗೆ ಅವಮಾನವನ್ನೂ ಮಾಡಿದ್ದಾನೆ.
ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಮ್ಯಾನೇಜರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಸದ್ಯ ಈ ಬಗ್ಗೆ ಶಾಲಾ ನಿರೀಕ್ಷಕರು ತನಿಖೆಗೆ ಆದೇಶಿಸಿದ್ದಾರೆ. ಅಕ್ಟೋಬರ್ 1 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ : ಎರಡು ಬೈಕ್ಗಳ ನಡುವೆ ಡಿಕ್ಕಿ – ಬುಲೆಟ್ ಸವಾರನಿಗೆ ಗಂಭೀರ ಗಾಯ..!