ಬೆಂಗಳೂರು : ಹೆಚ್‌ಡಿ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ವಿಚಾರ ಮೈತ್ರಿ ಪಕ್ಷದಲ್ಲಿನ ದಂಗಲ್‌ಗೆ ಕಾರಣವಾಗಿದ್ದು, ಲೋಕಸಭೆಯಲ್ಲಿ ಜೊಡೆತ್ತಿನ ರೀತಿ ಒಂದಾಗಿದ್ದ ಪಕ್ಷಗಳ ನಾಯಕರು ಇದೀಗ ಚುನಾವಣೆಗೆ ಪ್ರತ್ಯೇಕವಾಗಿ ರಣತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ. ಸಿಪಿ ಯೋಗೇಶ್ವರ್‌ಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಅತ್ತ ಟಿಕೆಟ್ ತನ್ನಲ್ಲೇ ಉಳಿಸಿಕೊಳ್ಳಲು ಜೆಡಿಎಸ್ ಕಸರತ್ತು ನಡೆಸುತ್ತಿದೆ.
ಅದರಂತೆ ನಿನ್ನೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ದಿನಾಂಕ ನಿಗದಿ ಆಗ್ತಿದ್ದಂತೆ ಬೆಂಕಿ ಬೆಳವಣಿಗೆಯೊಂದು ನಡೆದಿದೆ. ಹೌದು.. ಬಿಜೆಪಿ ಸೈನಿಕ ಸಿ.ಪಿ.ಯೋಗೇಶ್ವರ್ ಇಂದು ಚನ್ನಪಟ್ಟಣದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರ ಸಭೆ ಕರೆದಿದ್ದಾರೆ. ಟಿಕೆಟ್ ವಿಚಾರವಾಗಿ ಅಸಮಾಧಾನಗೊಂಡಿರುವ ಯೋಗೇಶ್ವರ್ ಬಂಡಾಯದ ಅಸ್ತ್ರ ಪ್ರಯೋಗಿಸುತ್ತಾರೆಯೇ ಎಂಬ ಕುತೂಹಲ ಮೂಡಿದೆ.
ಈಗಾಗಲೇ ಹೆಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಸ್ಪಷ್ಟ ಸಂದೇಶ ನೀಡಿದ್ದು, ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿ, ನಾಡಿಮಿಡಿತ ಅರಿಯುವ ಪ್ರಯತ್ನ ನಡೆಸಿದ್ದಾರೆ. ಇದೇ ವೇಳೆ, ಚನ್ನಪಟ್ಟಣ ಬಿಜೆಪಿಗೆ ಬಿಟ್ಟು ಕೊಡುವ ಕುರಿತು ಯಾವುದೇ ಒಪ್ಪಂದ ಈ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮತ್ತೊಂದೆಡೆ ಬಿಜೆಪಿ ಪದಾಧಿಕಾರಿಗಳು ಸಭೆ ನಡೆಸಿ ಜಿಲ್ಲೆಯಲ್ಲಿ ಚನ್ನಪಟ್ಟಣದಲ್ಲಿ ಮಾತ್ರ ಬಿಜೆಪಿ ಬಲಿಷ್ಠವಾಗಿದೆ. ಕ್ಷೇತ್ರ ಬಿಜೆಪಿ ಉಳಿಸಿಕೊಂಡು ಯೋಗೇಶ್ವರ್ ಕಣಕ್ಕಿಳಿಸಲು ಆಗ್ರಹಿಸಿದ್ದಾರೆ. ಈ ನಡುವೆಯೇ ಯೋಗೇಶ್ವರ್ ಸಭೆ ಕರೆದಿರುವುದು ಕುತೂಹಲ ಮೂಡಿಸಿದೆ. ಯೋಗೇಶ್ವರ್ ನನಗೇ ಟಿಕೆಟ್ ಕೊಡುವಂತೆ ದೆಹಲಿವರೆಗೂ ಸಮರ ಸಾರಿದ್ದರು. ಟಿಕೆಟ್ ಸಿಗಲ್ಲಾ ಅನ್ನೋದು ಕನ್ಫರ್ಮ್ ಆಗ್ತಿದ್ದಂತೆ ಹೆಚ್ಡಿಕೆ ಮೇಲೆ ಗರಂ ಆಗಿದ್ದರು. ಬಿಜೆಪಿ ಒಕ್ಕಲಿಗ ನಾಯಕರನ್ನು ಹೆಚ್ಡಿಕೆ ನಾಶ ಮಾಡ್ತಿದ್ದಾರೆ ಎಂದು ನೇರಾನೇರವಾಗಿ ಕಿಡಿಕಾರಿದ್ದರು. ಹಾಗಾಗಿ ಇವತ್ತಿನ ಸಭೆ ಭಾರೀ ಕುತೂಹಲ ಮೂಡಿಸಿದ್ದು, MLC ಸಿ.ಪಿ.ಯೋಗೇಶ್ವರ್ ಇಂದೇ ಬಂಡಾಯದ ಬಾಂಬ್ ಸಿಡಿಸ್ತಾರಾ ಎಂದು ಕಾದುನೋಡಬೇಕು..
ಇದನ್ನೂ ಓದಿ : ವಯನಾಡ್ ಸ್ಪರ್ಧೆ ಮೂಲಕ ರಾಜಕೀಯಕ್ಕೆ ಪ್ರಿಯಾಂಕಾ ಗಾಂಧಿ ಪಾದಾರ್ಪಣೆ – ಏನಿದರ ಪ್ಲಾನ್?